ಯಾದಗಿರಿ: ಬೆಳಗಿನ ಆಹಾರ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲೂಕಿನ ಅಬ್ಬೆತುಮಕೂರಿನ ವಿಶ್ವರಾಧ್ಯ ವಿದ್ಯಾವರ್ಧಕ ವಸತಿ ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿಗಳು ಸೇವಿಸಿದ ಉಪಹಾರದಲ್ಲಿ ಸತ್ತ ಹಾವಿನ ಮರಿ ಪತ್ತೆಯಾಗಿತ್ತು.
ವಸತಿ ಶಾಲೆಯಲ್ಲಿ ಸಿಬ್ಬಂದಿ ಉಪಹಾರಕ್ಕೆ ಉಪ್ಪಿಟ್ಟು ಮಾಡಿದ್ದು, ಹಾವು ಪತ್ತೆಯಾಗಿತ್ತು. ಈ ಉಪಹಾರ ಸೇವಿಸಿದ 56 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಸಮೀಪದ ಮುದ್ನಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹೆಚ್ಚಿನ ಚಿಕಿತ್ಸೆ ಪಡೆಯಲು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಉಪಹಾರದಲ್ಲಿ ಸತ್ತ ಹಾವಿನ ಮರಿ ಕಾಣಿಸಿಕೊಂಡ ನಂತರ ವಿದ್ಯಾರ್ಥಿಗಳಲ್ಲಿ ಆತಂಕ ಮನೆಮಾಡಿದೆ. ಜಿಲ್ಲಾಸ್ಪತ್ರೆಗೆ ಸ್ಥಳೀಯ ಶಾಸಕ ವೆಂಕಟರೆಡ್ಡಿ ಮುದ್ನಾಳ ಮತ್ತು ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ.