ವಿಜಯಪುರ : ನಗರದ ಗಗನ್ ಮಹಲ್ ಹಾಗೂ ಜಿಲ್ಲಾಧಿಕಾರಿಗಳ ನಿವಾಸದ ಬಳಿಯಿರುವ ಪುರಾತನ ಹೊಂಡಕ್ಕೆ ಬಿದ್ದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಮಹಿಳೆಯೊಂದಿಗೆ ಹೊಂಡದ ಸಮೀಪ ಆಗಮಿಸಿದ್ದ ಯುವಕ ಶರ್ಟ್ ತೆಗೆದಿಟ್ಟಿದ್ದಾನೆ. ನಂತರ ಇಬ್ಬರೂ ಹಾರಲು ಮುಂದಾಗಿದ್ದಾರೆ. ಮೊದಲು ಯುವಕ ನೀರಿಗೆ ಹಾರಿರುವ ಕುರಿತು ಕೆಲವರು ನೀಡಿದ ಮಾಹಿತಿಯಂತೆ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸುತ್ತಿದ್ದರು. ಈ ವೇಳೆ ಮಹಿಳೆ ಸ್ಥಳದಿಂದ ಪರಾರಿಯಾಗಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಯುವಕನ ಮೃತದೇಹಕ್ಕಾಗಿ ಮೂರು ಗಂಟೆಗಳ ಕಾಲ ಶೋಧ ನಡೆಸಿದ್ದಾರೆ. ನಂತರ ಯುವಕನ ಶವ ಸಿಕ್ಕಿದೆ. ಯುವಕನಿಗೆ ಅಂದಾಜು 25 ವರ್ಷ ವಯಸ್ಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಹೆಸರು, ವಿಳಾಸ ಪತ್ತೆಯಾಗಿಲ್ಲ.
ಶವವನ್ನು ಗೋಲಗುಮ್ಮಟ ಪೊಲೀಸರ ವಶಕ್ಕೆ ಒಪ್ಪಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಯುವಕನ ಹೆಸರು ವಿಳಾಸ ಪತ್ತೆಗೆ ಮುಂದಾಗಿದ್ದಾರೆ. ಗೋಲಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ: ಕೌಟುಂಬಿಕ ಕಲಹದಿಂದ ಮನನೊಂದು ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಮ್ಯಾಗಳಪೇಟೆಯಲ್ಲಿ (ಆಗಸ್ಟ್ 10-2023) ನಡೆದಿತ್ತು. ಮೃತರನ್ನು ಚೌಡಮ್ಮ(26), 4 ಹಾಗೂ 2 ವರ್ಷದ ಮಕ್ಕಳು ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಮುದಗಲ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದರು.
ಇಬ್ಬರು ರೈತರು ಆತ್ಮಹತ್ಯೆ: ಇನ್ನೊಂದೆಡೆ, ಹಾವೇರಿ ಜಿಲ್ಲೆಯಲ್ಲಿ ಇಬ್ಬರು ರೈತರು (ಆಗಸ್ಟ್ 23-2023) ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಬೆಳಕಿಗೆ ಬಂದಿತ್ತು. ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿಯಲ್ಲಿ ಗಿರೀಶ್ ಮುರ್ಡೆಪ್ಪನವರ್ ಮೃತಪಟ್ಟರೆ, ಮತ್ತೊಂದೆಡೆ ಬ್ಯಾಡಗಿ ತಾಲೂಕಿನ ಶೀಡೆನೂರು ಗ್ರಾಮದ ನಾಗೇಶಪ್ಪ ಕೊಡಗದ್ದಿ (50) ಆತ್ಮಹತ್ಯೆಗೆ ಶರಣಾಗಿದ್ದರು.