ವಿಜಯಪುರ: ಲವ್ ಜಿಹಾದ್ ತಡೆ ಕಾಯ್ದೆ ಹಾಗೂ ಮತಾಂತರ ಕಾಯ್ದೆ ಜಾರಿ ವಿಚಾರವಾಗಿ ಮಾತನಾಡಿರುವ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಭಾರತದಲ್ಲಿ ಕ್ರಾಸ್ ಬ್ರೀಡ್ ಇದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವೇ ಕ್ರಾಸ್ ಬ್ರೀಡ್. ಮುಂಬರುವ ಆಧಿವೇಶನದಲ್ಲಿ ಗೋ ಹತ್ಯೆ ತಡೆ ಕಾಯ್ದೆ ಮತ್ತು ಲವ್ ಜಿಹಾದ್ ತಡೆ ಕಾಯ್ದೆಯನ್ನು ಜಾರಿ ಮಾಡಲಾಗುತ್ತದೆ. ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿನ ಕಾನೂನು ಮಾದರಿಯಲ್ಲಿ ಕಾಯ್ದೆ ಜಾರಿ ಮಾಡುತ್ತೇವೆ. ನಮ್ಮ ಸಚಿವರನ್ನು, ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿ ಈ ಕುರಿತು ಅಧ್ಯಯನ ಮಾಡಲಾಗುತ್ತದೆ. ಆ ರಾಜ್ಯಕ್ಕಿಂತ ಹೆಚ್ಚು ಕಠಿಣವಾದ ಕಾನೂನನ್ನು ನಾವು ಜಾರಿ ಮಾಡುತ್ತೇವೆ ಎಂದರು.
ಜಿಹಾದ್ ಮೂಲಕ ಹಿಂದೂ ಮಹಿಳೆಯನ್ನು ಮತಾಂತರ ಮಾಡುವುದು ಅಪಾಯಕಾರಿ, ಈಗಾಗಲೇ ದೆಹಲಿಯ ಜಾಮಿಯಾ ಮಸೀದಿ ಮೌಲಾನಾ ನಾವು ಹಿಂದೂಗಳಿಗೆ ಹೆಣ್ಣು ಸಿಗಲಾರದಂತೆ ನೋಡಿಕೊಳ್ಳುತ್ತೇನೆ ಎಂದಿದ್ದಾನೆ. ಆದರೆ, ನಾವು ಅವರಿಗೆ ಹೆಣ್ಣು ಸಿಗಲಾರದಂತೆ ನೋಡಿಕೊಳ್ಳುತ್ತೇವೆ ಎಂದು ಗುಡುಗಿದರು.
ಹೋರಾಟಗಾರರ ವಿರುದ್ಧ ಕಿಡಿ: ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಮಾಡುವವರು ನಕಲಿ ಹೋರಾಟಗಾರರು. ಕನ್ನಡ ಪರ ಹೋರಾಟಗಾರರರು ಖುದ್ದು ಶಾಲೆಗಳನ್ನು ಬಂದ್ ಮಾಡಿಸುತ್ತಾರಾ? ಅಥವಾ ಉರ್ದು ಬೋರ್ಡ್ಗಳನ್ನು ಬಂದ್ ಮಾಡಿಸುತ್ತಾರಾ?. ಹಿಂದಿ ನಮ್ಮ ರಾಷ್ಟ್ರ ಭಾಷೆ, ಕನ್ನಡ ನಮ್ಮ ಮಾತೃಭಾಷೆ, ಕನ್ನಡ ಪರ ಹೋರಾಟಗಾರರ ಮಕ್ಕಳು, ಮೊಮ್ಮಕ್ಕಳು, ಎಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಸರ್ಕಾರ ತನಿಖೆ ಮಾಡಲಿ, ಕಲಬುರಗಿ ರೈಲ್ವೆ ಸ್ಟೇಷನ್ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಮೇಲೆ ಉರ್ದು ಬೋರ್ಡ್ ಇದೆ. ತಾಕತ್ತಿದ್ದರೆ ಕನ್ನಡ ಪರ ಹೋರಾಟಗಾರರು ಹಾಗೂ ವಾಟಾಳ್, ಈ ಬೋರ್ಡ್ಗಳನ್ನು ತೆರವು ಮಾಡಲಿ ಎಂದು ಸವಾಲು ಹಾಕಿದರು.
ಇನ್ನು ಸಿಎಂ ಆಪ್ತ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ್, ದೊಡ್ಡ ಕಥೆಯಿದೆ. ಎಲ್ಲವೂ ನನಗೆ ಗೊತ್ತು, ಕಾಲ ಬಂದಾಗ ಹೇಳುತ್ತೇನೆ. ಸಿಎಂ ಅವರು ಸಚಿವ ಸಂಫುಟ ವಿಸ್ತರಣೆ ಮಾಡಲಿ. ನಂತರ ಮಾತನಾಡುತ್ತೇನೆ ಎಂದು ಪರೋಕ್ಷವಾಗಿ ಸಿಎಂ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಯತ್ನಾಳ್ ಸಚಿವ ಸ್ಥಾನಕ್ಕಾಗಿ ದೆಹಲಿಗೆ, ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಮನೆ ಬಾಗಿಲಿಗೆ ಹೋಗಿಲ್ಲ. ನಾನು ಡೌನ್ ಆಗಿಲ್ಲ, ಡೌನ್ ಆಗುವವನು ನಾನಲ್ಲ. ಸಿಎಂ ಹೊಸ ಸಚಿವ ಸಂಪುಟ ರಚನೆ ಮಾಡಿದ ಬಳಿಕ ಮಾತನಾಡುವೆ ಎಂದರು.