ವಿಜಯಪುರ : ವಿಜಯಪುರದಲ್ಲಿ ನಕಲಿ ಭೂ ದಾಖಲೆ ಸೃಷ್ಟಿಯ ಹಾವಳಿ ಹಾಗೂ ಅಕ್ರಮ ಆಸ್ತಿಯನ್ನು ಸರ್ಕಾರ ಸಿಐಡಿ ತನಿಖೆ ನಡೆಸುವಂತೆ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಆಗ್ರಹಿಸಿದ್ದಾರೆ.
ನಕಲಿ ದಾಖಲಾತಿ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಆಸ್ತಿ ಅವ್ಯವಹಾರ ಆಗಿದೆ. ಅನ್ಯ ಊರುಗಳಿಗೆ ಹೋಗಿ ನೆಲೆಸಿದವರನ್ನು ಗುರುತಿಸಿ ಅವರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇದರ ಹಿಂದೆ ಕೆಲವು ರಾಜಕೀಯ ಹಿತಾಸಕ್ತಿಗಳು ಸಹ ಇವೆ. ಹೀಗಾಗಿ, ರಾಜ್ಯದಲ್ಲಿಯೇ ಇದೊಂದು ದೊಡ್ಡ ಜಾಲ ಇದ್ದು, ಸಿಐಡಿ ತನಿಖೆ ಮಾಡಲು ಮತ್ತೊಮ್ಮೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವೆ ಎಂದರು.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಭೋಗಸ್ ಹಿಂದುತ್ವವಾದಿ ಎಂದು ಸ್ವಪಕ್ಷೀಯ ಶಾಸಕರ ವಿರುದ್ಧವೇ ಅಪ್ಪಾ ಸಾಹೇಬ್ ಪಟ್ಟಣಶೆಟ್ಟಿ ಹರಿಹಾಯ್ದರು.
ಶಾಸಕ ಯತ್ನಾಳ್ ಭೋಗಸ್ ರಾಜಕಾರಣಿಯಾಗಿದ್ದಾರೆ ಎಂದ ಅವರು, ನನ್ನನ್ನು ದಯವಿಟ್ಟು ಕೆಣಕಬೇಡಿ ಎಂದು ಯತ್ನಾಳ್‌ಗೆ ಎಚ್ಚರಿಸಿದರು. ಅಲ್ಲದೇ, ಮುಖ್ಯವಾಹಿನಿಗೆ ಬಂದು ಮಾತನಾಡುವುದನ್ನು ಯತ್ನಾಳ್ ರೂಢಿಸಿಕೊಳ್ಳಬೇಕು. ಅದನ್ನು ಬಿಟ್ಟು ಕಾಲೋನಿಯಲ್ಲಿ ಮಾತನಾಡುವುದನ್ನು ಬಿಡಬೇಕು ಎಂದು ಲೇವಡಿ ಮಾಡಿದರು.
ರಾಜಕಾರಣದಲ್ಲಿ ಯತ್ನಾಳ್ ಜೂನಿಯರ್ ಆಗಿದ್ದು, ಸಚಿವ ನಿರಾಣಿಯೇ ಸೀನಿಯರ್ ಎಂದು ಸಚಿವ ನಿರಾಣಿ ಪರವಾಗಿ ಪಟ್ಟಣಶೆಟ್ಟಿ ಬ್ಯಾಟಿಂಗ್ ಬೀಸಿದರು.