ಮುದ್ದೇಬಿಹಾಳ: ಕೇಂದ್ರ ಮಾಜಿ ಸಚಿವ, ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕ ಸಿ.ಎಂ. ಇಬ್ರಾಹಿಂ ಅವರು ಕಾಂಗ್ರೆಸ್ ತೊರೆಯುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ ಜೆಡಿಎಸ್ ರಾಜ್ಯ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಮಂಗಳಾದೇವಿ ಬಿರಾದಾರ ಸಿ.ಎಂ. ಇಬ್ರಾಹಿಂ ಅವರು ಜೆಡಿಎಸ್‌ಗೆ ಬರುತ್ತಿರುವುದು ಸ್ವಾಗತಾರ್ಹ ಎಂದಿದ್ದಾರೆ.
ಪಟ್ಟಣದ ಜೆಡಿಎಸ್ ಗೃಹ ಕಚೇರಿಯಲ್ಲಿ ವಿವಿಧ ಗ್ರಾ.ಪಂಗೆ ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳಿಗೆ ಹಾಗೂ ಪಕ್ಷದ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿ, ಬಳಿಕ ಅವರು ಮಾತನಾಡಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮಂಗಳಾದೇವಿ, ಕಾಂಗ್ರೆಸ್‌ನವರು ಅಲ್ಪಸಂಖ್ಯಾತರನ್ನು ಗುತ್ತಿಗೆ ಪಡೆದವರಂತೆ ಮಾತನಾಡುತ್ತಾರೆ. ಸಿ.ಎಂ. ಇಬ್ರಾಹಿಂ ಜೆಡಿಎಸ್‌ಗೆ ಬಂದ ನಂತರ ಕಾಂಗ್ರೆಸ್ನವರಿಗೆ ಅವರನ್ನು ವೋಟ್‌ಬ್ಯಾಂಕ್ ಆಗಿ ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.
ಇಬ್ರಾಹಿಂ ಅವರು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಚರ್ಚಿಸಿದ್ದು ಸ್ವಾಗತಾರ್ಹ. ಅಲ್ಪಸಂಖ್ಯಾತರು ಸ್ವಂತ ಬಲದಿಂದ ಮೇಲೆ ಬರುವಂತಿರಬೇಕು. ಬೇರೆಯವರು ಇವರನ್ನು ಉಪಯೋಗಿಸಿ ತಾವು ಮೇಲೆ ಬರಲು ಆಸ್ಪದ ಕೊಡಬಾರದು ಎಂದು ಹೇಳಿದರು.