ವಿಜಯಪುರ: ಕೌಟುಂಬಿಕ ಕಲಹ ಹಿನ್ನೆಲೆ ಮಹಿಳೆಯೊಬ್ಬಳು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವನಬಾಗೇವಾಡಿ ತಾಲೂಕಿನ ಉಕ್ಕಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊರ ಭಾಗದಲ್ಲಿರೋ ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಯಲ್ಲಿ ಮಹಿಳೆ ಮತ್ತು ಮಗುವೊಂದರ ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ರೇಣುಕಾ ಅಮೀನಪ್ಪ ಕೋನಿನ್ (26 ), ಮತ್ತು ಎರಡು ಹಾಗೂ ಒಂದು ವರ್ಷದ ಹೆಣ್ಣು ಮಗು ಎಂದು ಗುರುತಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಗಂಡನ ಕುಟುಂಬಸ್ಥರೊಡನೆ ಜಗಳವಾಡಿದ್ದ ರೇಣುಕಾ ತನ್ನ ಇಬ್ಬರು ಹೆಣ್ಮಕ್ಕಳ ಜೊತೆ ಮನೆ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಎರಡು ದಿನಗಳಿಂದ ರೇಣುಕಾ ಹಾಗೂ ಮಕ್ಕಳಿಗಾಗಿ ಆಕೆಯ ಗಂಡ ಅಮೀನಪ್ಪ ಕೋನಿನ್ ಮತ್ತು ಆತನ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಎಲ್ಲೂ ಸಿಗದ ಹಿನ್ನೆಲೆ ಕಾಣೆಯಾಗಿದ್ದಾರೆ ಎಂದು ಅಮೀನಪ್ಪ ಕೋನಿನ್ ಸೋಮವಾರ ಮನಗೂಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಮಂಗಳವಾರದಂದು ಕಾಲುವೆಯಲ್ಲಿ ರೇಣುಕಾ ಹಾಗೂ ಎರಡು ವರ್ಷದ ಮಗುವಿನ ಶವ ಪತ್ತೆಯಾಗಿದೆ. ಒಂದು ವರ್ಷದ ಮಗುವಿನ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ಮನಗೂಳಿ ಪೊಲೀಸ್ ಠಾಣೆಯ ಪಿಎಸ್ಐ ಪರಶುರಾಮ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತು ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಟ್ರಕ್ ಸ್ಫೋಟ: ಚಾಲಕ ಸಜೀವ ದಹನ, ಹತ್ತಿರದ ಹೋಟೆಲ್ ಭಸ್ಮ