ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿಪಟ್ಟಣ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಗುರುವಾರ ಭಾರಿ ಗಾಳಿಯೊಂದಿಗೆ ಆಲಿಕಲ್ಲಿನ ಮಳೆ ಸುರಿದಿದೆ. ಸತತ 4 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಜನರು ಹೈರಾಣಾಗಿದ್ದಾರೆ. ತಾಲೂಕಿನ ಬಲ್ಲಾಹುಣಿಸಿ ಗ್ರಾಮದಲ್ಲಿ ಕಾಮಗಾರಿ ಹಂತದಲ್ಲಿರುವ ರೇಷ್ಮೆ ಮನೆಯ ಗೋಡೆ ಬಿದ್ದು ಶೇಖರ್ (25) ಎಂಬ ಯುವಕ ಸಾವಿಗೀಡಾಗಿದ್ದಾನೆ. ಜೊತೆಗಿದ್ದ ಬಸವರಾಜ ಎಂಬುವರ ಕಾಲು ಮುರಿದಿದೆ.
ಸಿಡಿಲಿಗೆ ತೆಂಗಿನ ಮರ ಆಹುತಿ: ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಸಿಡಿಲಿಗೆ ತೆಂಗಿನ ಮರ ಆಹುತಿಯಾಗಿದೆ. ಹನುಮಸಾಗರದ ಶಂಕರಪ್ಪ ಪರಸಪ್ಪ ಹುಲಮನಿ ಮನೆಯ ಮುಂಭಾಗ ತೆಂಗಿನ ಮರಕ್ಕೆ ಸಿಡಿಲು ಎರಗಿ, ಧಗಧಗನೇ ಹೊತ್ತಿ ಉರಿದಿದೆ. ಈ ಬೆಳವಣಿಗೆ ಕೆಲವು ಕ್ಷಣ ಆತಂಕ ಸೃಷ್ಟಿಸಿತ್ತು.
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನದಿಂದ ಬಿರುಗಾಳಿಸಮೇತ ಗುಡುಗು, ಮಿಂಚು ಸೇರಿ ಭಾರಿ ಮಳೆಯಾಗಿದೆ. ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಬಳಿ ವಿಜಯಪುರ- ಅಥಣಿ ಮುಖ್ಯರಸ್ತೆ ಮೇಲೆ ಬೃಹತ್ ಮರವೊಂದು ಬಿದ್ದು ಸಾರಿಗೆ ಸಂಚಾರ ಸ್ಥಗಿತಗೊಂಡಿದೆ. ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ಭಾರಿ ಗಾತ್ರದ ಮರ ನೆಲಕ್ಕುರುಳಿದೆ.
ಇದನ್ನೂ ಓದಿ: ಯುವತಿ ಸಾವಿನ ವಿಚಾರ ಮುಚ್ಚಿಟ್ಟಿದ್ದಕ್ಕೆ ಪಾಲಕರ ವಿರುದ್ಧ ಪ್ರಕರಣ