ವಿಜಯಪುರ: ಪೌರತ್ವ ಕಾಯ್ದೆ ವಿರೋಧಿಸಿ ನಾಳೆ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೋರಾಟ ಮಾಡುತ್ತಿರುವುದು ಅಂಬೇಡ್ಕರ್ಗೆ ಅವಮಾನ ಮಾಡಿದಂತೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಂಬೇಡ್ಕರ್ ರಚಿಸಿದ ಸಂವಿಧಾನದ ಪ್ರಕಾರವೇ ಪೌರತ್ವ ಕಾಯ್ದೆ ಜಾರಿಯಾಗಿದೆ. ಸಂವಿಧಾನ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೇಲೆ ಗೌರವ ಇದ್ದವರು ಪೌರತ್ವ ಕಾಯ್ದೆ ಒಪ್ಪಿಕೊಳ್ಳಬೇಕು ಎಂದರು.
ಕಾಯ್ದೆ ವಿರುದ್ಧ ಹೋರಾಟ ನಡೆಸಿದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದಂತೆ. ಒಮ್ಮೆ ಲೋಕಸಭೆ, ರಾಜ್ಯಸಭೆಯಲ್ಲಿ ಮಸೂದೆ ಪಾಸ್ ಆದರೆ ವಿರೋಧಿಸಿ ಪ್ರಯೋಜನವಿಲ್ಲ. ಇನ್ನಾದರೂ ವಿರೋಧ ಪಕ್ಷಗಳು ಅರಿತುಕೊಳ್ಳಬೇಕು. ಇಷ್ಟಾಗಿಯೂ ಪೌರತ್ವ ಕಾಯ್ದೆ ವಿರೋಧಿಸುವರು ಪಾಕಿಸ್ತಾನದ ಏಜೆಂಟರು ಎಂದು ಆಕ್ರೋಶ ಹೊರಹಾಕಿದರು.
ಬಿಎಸ್ ವೈ ನಿವೃತ್ತಿ:
ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎನ್ನುವ ಕಲ್ಲಡ್ಕ ಪ್ರಭಾಕರ್ ಹೇಳಿಕೆ ಪ್ರಸ್ತಾಪಿಸಿದ ಅವರು, ಭಟ್ಟರು ಹಿರಿಯ ಸಂಘ ಜೀವಿಗಳು, ಅವರು ಸಹಜವಾಗಿ ಬಿಜೆಪಿ ಸಿದ್ಧಾಂತ ಹೇಳಿದ್ದಾರೆ. 75ವರ್ಷಕ್ಕೆ ಚುನಾವಣೆಯಿಂದ ಹಿಂದೆ ಸರಿಯಬೇಕು. ಮುಂದಿನ ದಿನಗಳಲ್ಲಿ ಬಿಎಸ್ವೈ ರಾಜ್ಯಪಾಲ ಇಲ್ಲವೇ ಬೇರೆ ಉನ್ನತ ಹುದ್ದೆ ದೊರೆಯಬಹುದು ಎನ್ನುವ ಮೂಲಕ ಕಲ್ಲಡ್ಕ ಪ್ರಭಾಕರ ಹೇಳಿಕೆ ಸಮರ್ಥಿಸಿಕೊಂಡರು.