ಮುದ್ದೇಬಿಹಾಳ: ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿದ್ದು, ಪಂಚಾಯಿತಿವಾರು ಪ್ರತ್ಯೇಕ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದವರ ಹೆಸರುಗಳು ಹೊಸದಾಗಿ ಪ್ರಕಟಿಸಿರುವ ಮತದಾರರ ಪಟ್ಟಿಯಿಂದ ನಾಪತ್ತೆಯಾಗಿವೆ. ಇದರಿಂದ ಕಂಗಾಲಾಗಿರುವ ಆಕಾಂಕ್ಷಿಗಳು ದಿನವೂ ತಹಶೀಲ್ದಾರ್ ಕಛೇರಿಯ ಚುನಾವಣಾ ವಿಭಾಗಕ್ಕೆ ಓಡಾಡುತ್ತಿದ್ದಾರೆ.
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣದಿರುವ ಕುರಿತು ಜನರು ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ. ಅರ್ಜಿ ಕೊಡದಿದ್ದರೂ ಕಳೆದುಕೊಂಡಿರುವ ತಮ್ಮ ಹಕ್ಕನ್ನು ಮರಳಿ ಹೇಗೆ ಗಳಿಸಿಕೊಳ್ಳಬೇಕು ಎಂದು ಹಲವಾರು ಬಗೆಯ ದಾರಿಯನ್ನು ಅವರು ಹುಡುಕಾಡುತ್ತಿದ್ದಾರೆ.
ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿ ಹೆಸರೇ ನಾಪತ್ತೆ: ತಾಲೂಕಿನ ಕವಡಿಮಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರೂರ ಗ್ರಾಮದ ಮತಕ್ಷೇತ್ರ ಸಂಖ್ಯೆ 3ರಿಂದ ಸನ್ 2019ರ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಕಾಶ ಹೊಳಿ ಅವರ ಹೆಸರು ಹೊಸದಾಗಿ ಪ್ರಕಟಿಸಿರುವ ಮತದಾರರ ಪಟ್ಟಿಯಲ್ಲಿ ಬಂದಿಲ್ಲ. ನ.12, 2019 ರಂದು ಸರೂರ ಗ್ರಾಮದ ವಾರ್ಡ್ ಸಂಖ್ಯೆ 3ಕ್ಕೆ ನಡೆದಿದ್ದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ನನ್ನ ಹೆಸರು ಈಗ ಮತದಾರರ ಪಟ್ಟಿಯಲ್ಲಿ ಇಲ್ಲ ಇದರಿಂದ ನನಗೆ ದಿಕ್ಕೆ ತೋಚದಂತಾಗಿದೆ ಎಂದು ಪ್ರಕಾಶ ಹೊಳಿ ಅಳಲು ತೋಡಿಕೊಂಡಿದ್ದಾರೆ.
ಬಿಎಲ್‌ಓ ಜೊತೆಗೆ ಆಗಮಿಸಿ ವಿಚಾರಣೆ: ಸರೂರ ಗ್ರಾಮದ ಮತದಾರರ ಪಟ್ಟಿಯನ್ನು ಗಮನಿಸಿದ ಬಿಎಲ್‌ಓ ಎಚ್.ಎನ್ ನಾಗಾವಿ, ಮತ್ತು ಪ್ರಕಾಶ ಹೊಳಿ, ಪಟ್ಟಣದ ಮಿನಿವಿಧಾನಸೌಧದಲ್ಲಿರುವ ಚುನಾವಣಾ ಶಾಖೆಗೆ ಬಂದು ವಿಚಾರಿಸಿದಾಗ ನಮಗೇನೂ ಈ ಬಗ್ಗೆ ಗೊತ್ತಿಲ್ಲ. ಆಯೋಗದಿಂದ ಬಂದಿರುವ ಮತದಾರರ ಪಟ್ಟಿಯನ್ನು ನಾವು ಕೊಡುತ್ತಿದ್ದೇವೆ. ಅದರಲ್ಲಿ ಹೆಸರು ಹೋಗಿರುವುದು, ಬಂದಿರುವುದು ನಮಗೆ ತಿಳಿಯುವುದಿಲ್ಲ. ಹೆಸರು ತೆಗೆದು ಹಾಕುವ ಅಧಿಕಾರವೂ ನಮಗಿಲ್ಲ ಎಂದು ಶಿರಸ್ತೇದಾರ ಎ.ಎಚ್ ಬಳೂರಗಿ ಆಕಾಂಕ್ಷಿತರಿಗೆ ತಿಳಿಸಿದ್ದಾರೆ.
ಹುಲ್ಲೂರಿನಲ್ಲೂ ಸಮಸ್ಯೆ: ಹುಲ್ಲೂರ ಗ್ರಾಮದ ಭಾಗ ಸಂಖ್ಯೆ 59 ಮತ್ತು 60ರ ಮತದಾರರ ಪಟ್ಟಿಯಿಂದಲೂ ಇಬ್ಬರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಪ್ರಭುಗೌಡ ಪಾಟೀಲ ತಹಸೀಲ್ದಾರ್‌ರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಹುಲ್ಲೂರ ಗ್ರಾಮದ ಅಕ್ಷತಾ ಭೀಮನಗೌಡ ಕೊಡಗನೂರ ಹಾಗೂ ಗುರುಬಾಯಿ ಸಿ ಕೊಡಗಾನೂರ ಅವರ ಹೆಸರು ಹೊಸದಾಗಿ ಬಿಡುಗಡೆಯಾದ ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ. ಕಳೆದ ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದ್ದರೂ ಇವರ ಹೆಸರು ಕಾಣೆಯಾಗಿರುವುದಕ್ಕೆ ಏನು ಕಾರಣ ಎಂಬುದೇ ತಿಳಿಯುತ್ತಿಲ್ಲ. ಹೀಗಾಗಿ ಮತದಾರರ ಪಟ್ಟಿಯಿಂದ ಆಯ್ದ ವ್ಯಕ್ತಿಗಳ ಹೆಸರು ಕಾಣೆಯಾಗದಿರುವುದಕ್ಕೆ ಕಾರಣ ಕಾಣದ ಕೈಗಳ ಕೈವಾಡವೇ? ಅಥವಾ ಬೇರೆ ಯಾರಾದರೂ ಈ ಕೆಲಸ ಮಾಡಿದ್ದಾರೆಯೇ ಎಂಬುದು ತೀವ್ರ ಸಂಶಯಕ್ಕೆ ಕಾರಣವಾಗಿದೆ ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಭೀಮನಗೌಡ ಕೊಡಗಾನುರ ದೂರಿದ್ದಾರೆ.