ವಿಜಯಪುರ: ಕೋವಿಡ್ ನಾಲ್ಕನೇ ಅಲೆ ಹೊಸ್ತಿಲಿನಲ್ಲಿರುವ ಹಿನ್ನೆಲೆ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಈ ಹಿಂದೆ ಆಮ್ಲಜನಕ ಹಾಗೂ ಐಸಿಯು ಹಾಸಿಗೆಗಳ ಕೊರತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವು ನೋವುಗಳು ಸಂಭವಿಸಿದ್ದವು. ಈ ಬಾರಿ ಹಾಗಾಗದಿರಲು ಜಿಲ್ಲಾ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ.
ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಆಮ್ಲಜನಕ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ರೋಗಿಗಳಿಗಾಗಿ 30 ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ. ಚಿಕ್ಕಮಕ್ಕಳಿಗಾಗಿಯೇ ಪ್ರತ್ಯೇಕವಾಗಿ 20ಹಾಸಿಗೆ ಬೆಡ್ಗಳನ್ನು ಕಾಯ್ದಿರಿಸಲಾಗಿದೆ. ಅದರಲ್ಲಿ 10 ಬೆಡ್ಗಳು ತೀವ್ರ ನಿಗಾ ಘಟಕವನ್ನು ಹೊಂದಿದೆ.
ಕೊರೋನಾ ಟೆಸ್ಟ್ ಆರಂಭ: ಕಳೆದ ಒಂದು ವರ್ಷದಿಂದ ಕೊರೋನಾ ಹಾವಳಿ ತಗ್ಗಿದ ಕಾರಣ ಕೊರೋನಾ ಟೆಸ್ಟ್ ನಿಧಾನಗತಿಯಲ್ಲಿ ನಡೆಯುತ್ತಿತ್ತು. ಇದೀಗ ಮತ್ತೆ ರೋಗದ ಗುಣಲಕ್ಷಣಗಳನ್ನು ಹೊಂದಿದವರನ್ನು ಟೆಸ್ಟ್ಗೆ ಒಳಪಡಿಸಲಾಗುತ್ತಿದೆ. ಪಾಸಿಟಿವ್ ಬಂದ ರೋಗಿಗಳ ಸಂಪರ್ಕದಲ್ಲಿ ಇರುವವರನ್ನು ತಕ್ಷಣ ಐಸೋಲೇಷನ್ ಮಾಡಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಆಸ್ಪತ್ರೆಯಲ್ಲಿ ಕೈಗೊಂಡ ಕ್ರಮ: ಆಕ್ಸಿಜನ್ (ಆಮ್ಲಜನಕ) ಲಭ್ಯತೆಗಾಗಿ ಈ ಬಾರಿ ಆರೋಗ್ಯ ಇಲಾಖೆ ಹೆಚ್ಚಿನ ಕಾಳಜಿ ವಹಿಸಿದೆ. ಆಸ್ಪತ್ರೆ ಆವರಣದಲ್ಲಿ1000ಎಲ್ಪಿಎಂ ಹಾಗೂ 850 ಎಲ್ಪಿಎಂ ಸಾಮರ್ಥ್ಯದ ಎರಡು ಆಮ್ಲಜನಕ ಘಟಕ ಸ್ಥಾಪನೆ ಮಾಡಲಾಗಿದೆ. ಇದು ದಿನದ 24ಗಂಟೆ ನಿರಂತರ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಮಾಡಲಿದೆ. ಇದರ ಜೊತೆ 6 ಕೆಎಲ್ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್ ಸ್ಥಾಪನೆ ಮಾಡಲಾಗಿದೆ. ತುರ್ತು ಪರಿಸ್ಥಿತಿಗಾಗಿ 180ಡಿ ಮಾದರಿಯ ಆಕ್ಸಿಜನ್ ಜಂಬೋ ಸಿಲಿಂಡರ್ ಸಹ ಲಭ್ಯವಿರಲಿದೆ.
ಕೊರೋನಾ ಪಾಸಿಟಿವ್ ರೋಗಿಗಳಿಗೆ ಹಾಸಿಗೆಗಳ ಕೊರತೆಯಾಗದಂತೆ, ಒಟ್ಟು 250 ಹಾಸಿಗೆ ಬೆಡ್ ಸಿದ್ದಪಡಿಸಲಾಗಿದೆ. ಇವುಗಳಿಗೆ ಆಕ್ಸಿಜನ್ ಸೌಲಭ್ಯ ಸಹ ಕಲ್ಪಿಸಲಾಗಿದೆ. ಇದರ ಜತೆ ಐಎಲ್ಐ ಪ್ರಕರಣಗಳಿಗೆ ಪ್ರತ್ಯೇಕವಾಗಿ 15 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಚಿಕ್ಕಮಕ್ಕಳಿಗೆ ಐಸಿಯು ಸೇರಿ 20ಹಾಸಿಗೆ ಸಿದ್ದಪಡಿಸಲಾಗಿದೆ. ಇದರ ಜತೆ 30 ವೆಂಟಿಲೇಟರ್, 10ಎಚ್ಎಸ್ಎನ್ಸಿ, 10 ಸಿಪ್ಯಾಪ್ ಹಾಗೂ 60 ಆಕ್ಸಿಜನ್ ಕನೆಕ್ಟರ್ ವ್ಯವಸ್ಥೆ ಮಾಡಲಾಗಿದೆ.
ಸಿಬ್ಬಂದಿಗೆ ತರಬೇತಿ: ಕೊರೊನಾ ತಡೆಯಲು ಸಿಬ್ಬಂದಿ ಕೊರತೆ ಕಾಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ. ಈಗಾಗಲೇ ಆಸ್ಪತ್ರೆ ವೈದ್ಯರಿಗೆ, ನರ್ಸ್ ಹಾಗೂ ಇತರೆ ಸಿಬ್ಬಂದಿಗೆ ತರಬೇತಿ ಸಹ ನೀಡಲಾಗಿದೆ. ಕೊರೋನಾ ಹೊರತು ಪಡಿಸಿ ಸಾಮಾನ್ಯ ರೋಗಿಗಳಿಗೆ ಸರದಿ ಸಾಲಿನಲ್ಲಿ ನಿಂತು ಚೀಟಿ ಮಾಡಿಸುವ ಬದಲು ಫಾಸ್ಟ್ ಟ್ಯ್ರಾಕಿಂಗ್ ನೋಂದಣಿ ಕೌಂಟರ್ ಸ್ಥಾಪನೆ ಮಾಡಲಾಗಿದೆ. ಕೊರೊನಾ ಅವಶ್ಯಕ ಔಷಧಿ ಲಭ್ಯತೆಯನ್ನು ಹೆಚ್ಚುವರಿ ಕಾಯ್ದಿರಿಸಲು ಸೂಚನೆ ನೀಡಲಾಗಿದೆ.
ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮಾತನಾಡಿ, ಕೊರೋನಾ 4ನೇ ಅಲೆ ಭೀತಿ ಎದುರಾಗಿದ್ದು, ಅದನ್ನು ಎದುರಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಹಿಂದೆ ಇದ್ದಂತಹ ಕೊರತೆಗಳನ್ನು ಸರಿಪಡಿಸಲಾಗಿದೆ. ಅಲ್ಲದೇ ಪ್ರತ್ಯೇಕವಾಗಿ ಐಸೋಲೇಷನ್ ವಾರ್ಡ್ನ್ನು ತಯಾರಿಸಲಾಗಿದೆ ಎಂದು ತಿಳಿಸಿದರು.
ಕೊರೋನಾ ರೋಗಿಗಳಿಗೆ ಪ್ರತ್ಯೇಕ ಆಂಬ್ಯುಲೆನ್ಸ್, ಆರ್ಟಿಪಿಎಸ್ಆರ್ ಪ್ರಯೋಗಾಲಯ, ಎಲ್ಲ ರೀತಿಯ ತಪಾಸಣೆ, ಲಸಿಕಾ ಬೂತ್ ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಸರ್ಜನ್ ಡಾ.ಸಂಗಣ್ಣ ಲಕ್ಕಣ್ಣನವರ ನೀಡಿದರು.
ಇದನ್ನೂ ಓದಿ: ಎಲ್ಲಾ ಸಮುದಾಯದ ಅಭಿವೃದ್ಧಿಗೆ ದುಡಿದ ಸಚಿವ ಡಾ ಸುಧಾಕರ್: ಜಿ ಪರಮೇಶ್ವರ್