ವಿಜಯಪುರ : ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರಿಗೆ ಸ್ಥಾನ ಕೈತಪ್ಪಿರುವುದು ಜಿಲ್ಲೆಯ ಜನತೆಯ ನಿರಾಶೆಗೆ ಕಾರಣವಾಗಿದೆ. ದಲಿತ ಮುಖಂಡರಾಗಿರುವ ರಮೇಶ್ ಜಿಗಜಿಣಗಿ ಅವರಿಗೆ ಸಚಿವ ಸ್ಥಾನ ಲಭಿಸುತ್ತದೆ ಎಂದು ಈ ಭಾಗದ ಜನರು ನಿರೀಕ್ಷೆ ಇಟ್ಟುಕೊಂಡಿದ್ದರು.
ಅದರಂತೆ ಕೇಂದ್ರ ಸರ್ಕಾರದ ಸಚಿವಾಲಯದಿಂದ ದೆಹಲಿಗೆ ಬನ್ನಿ ಎನ್ನುವ ಸಂದೇಶ ಜಿಗಜಿಣಗಿ ಅವರಿಗೆ ಲಭಿಸಿದ ಮೇಲೆ ಸಚಿವ ಸ್ಥಾನ ನಿಶ್ಚಿತ ಎನ್ನಲಾಗಿತ್ತು. ಆದರೆ, ದಲಿತ ಕೋಟಾದಡಿ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಹೆಸರು ಹೆಚ್ಚು ಪ್ರಚಾರಕ್ಕೆ ಬಂದಾಗ, ಜಿಗಜಿಣಗಿ ಅವರಿಗೆ ಸಚಿವ ಸ್ಥಾನ ಲಭಿಸುವುದು ಕೈತಪ್ಪುವ ಸಾಧ್ಯತೆ ಇದೆ ಎನ್ನುವ ಮಾತು ವಿಜಯಪುರ ಕ್ಷೇತ್ರದಲ್ಲಿ ಹರಿದಾಡ ತೊಡಗಿತ್ತು. ಅವರ ಊಹೆ ಈಗ ನಿಜವಾಗಿದೆ. ಸಂಸದ ರಮೇಶ ಜಿಗಜಿಣಗಿ ಅವರಿಗೆ ಸಚಿವ ಸ್ಥಾನ ಮಿಸ್ ಆಗಿದ್ದು, ದಲಿತ ಕೋಟಾದಲ್ಲಿ ಸಂಸದ ನಾರಾಯಣಸ್ವಾಮಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
6 ಬಾರಿ ಸಂಸದರಾಗಿ, ಕಳೆದ ಅವಧಿಯ ಮೋದಿ ಸರ್ಕಾರದಲ್ಲಿ ಒಂದು ಬಾರಿ ಕೇಂದ್ರ ಸಚಿವರಾಗಿ ಜಿಗಜಿಣಗಿ ಕಾರ್ಯ ನಿರ್ವಹಿಸಿದ್ದಾರೆ. ಬಹುತೇಕ ಅವರ ರಾಜಕೀಯ ಜೀವನದ ಕೊನೆ ಘಟ್ಟದಲ್ಲಿರುವ ಕಾರಣ ಈ ಬಾರಿ ಪ್ರಧಾನಿ ಮೋದಿ ಅವರು ಸಚಿವ ಸ್ಥಾನ ನೀಡುವ ಮೂಲಕ ಅವರನ್ನು ಬೀಳ್ಕೊಡಬಹುದು ಎನ್ನುವ ಲೆಕ್ಕಾಚಾರ ರಾಜ್ಯ ಬಿಜೆಪಿ ವಲಯದಲ್ಲಿ ಕೇಳಿ ಬಂದಿತ್ತು. ಆದರೆ, ಆ ನಿರೀಕ್ಷೆ ಹುಸಿಯಾಗಿದೆ.
ಪ್ರಧಾನಿ ಮೋದಿ ಈ ಬಾರಿ ಯುವ ನಾಯಕರಿಗೆ ಹೆಚ್ಚು ಪ್ರಾಧಾನ್ಯತೆ ನೀಡಿರುವುದು ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಸಚಿವ ಸ್ಥಾನ ತಪ್ಪಲು ಪ್ರಮುಖ ಕಾರಣವಾಗಿದೆ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.