ವಿಜಯಪುರ: ಐತಿಹಾಸಿಕ ಪ್ರವಾಸೋದ್ಯಮ ತಾಣವಾಗಿರುವ ವಿಜಯಪುರ ನಗರ ಈಗ ಅಕ್ಷರಶಃ ಹಾಳು ಕೊಂಪೆಯಾಗಿದೆ. ಕಂಡ ಕಂಡಲ್ಲಿ ಮಾರುದ್ದ ರಸ್ತೆ ಗುಂಡಿಗಳು ಬಿದ್ದಿದ್ದು, ರಸ್ತೆ ಅಭಿವೃದ್ಧಿಗೆ ಮಹಾನಗರ ಪಾಲಿಕೆ ಬಳಿ ಅನುದಾನವಿಲ್ಲದೇ ಸೊರಗಿ ಹೋಗಿದೆ. ಕನಿಷ್ಠ ನಗರ ಶಾಸಕರ ನಿಧಿಯ ಹಣವನ್ನಾದರೂ ಬಳಕೆ ಮಾಡಬೇಕೆಂದರೆ ಸರ್ಕಾರ ಅದನ್ನೂ ಹಿಂಪಡೆದುಕೊಂಡಿದೆ. ಇದೆಲ್ಲಾ ಕೊರೊನಾ ಮಹಾಮಾರಿ ಎಫೆಕ್ಟ್ ಅಂತಿದೆ ಜಿಲ್ಲಾಡಳಿತ.
ಇದರ ಜತೆ ಮಹಾನಗರ ಪಾಲಿಕೆ ಶಾಸಕರು ನಗರ ಅಭಿವೃದ್ಧಿಗೆ ಬಳಸುವ ಅನುದಾನವನ್ನು ಸಹ ರಾಜ್ಯ ಸರ್ಕಾರ ತಡೆ ಹಿಡಿದಿದೆ. 125 ಕೋಟಿ ರೂ. ಅನುದಾನ ಬಿಡುಗಡೆಯಾಗಿಲ್ಲ. ಇದಕ್ಕೆ ಸರ್ಕಾರ ಕೊರೊನಾ ಪರಿಣಾಮ ಕಾರಣ ಎಂದು ಹೇಳುತ್ತಿದ್ದರೆ, ನಗರ ಶಾಸಕರು ರಾಜಕೀಯ ಕಾರಣಕ್ಕೆ ಅಭಿವೃದ್ಧಿ ಹಣ ಬಿಡುಗಡೆ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಶಾಸಕ ಹಾಗೂ ಸರ್ಕಾರದ ನಡುವಿನ ಗುದ್ದಾಟ ಸರಿಪಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯೆ ಪ್ರವೇಶಿಸಿ ಶಾಸಕರ ಅನುದಾನ ಬಿಡುಗಡೆಯಾಗದಿರುವ ಕಾರಣ ನಗರ ರಸ್ತೆ ಹಾಳಾಗಿ ಹೋಗಿದೆ. ಎರಡು ದಿನದಲ್ಲಿ ಸಿಎಂ ಬಳಿ ಮಾತನಾಡಿ ಅನುದಾನ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.
ಮಹಾಮಾರಿ ಕೊರೊನಾ ಪರಿಣಾಮ ಕಳೆದ 7 ತಿಂಗಳಿಂದ ವ್ಯಾಪಾರ, ವಹಿವಾಟು ಪ್ರವಾಸೋದ್ಯಮ ಬಂದ್ ಆಗಿದ್ದವು. ಈಗ ತಾನೆ ಮತ್ತೆ ಕೊರೊನಾ ಹಿಮ್ಮೆಟ್ಟಿ ಸಹಜ ಸ್ಥತಿಗೆ ಮರಳುತ್ತಿವೆ. ಪ್ರವಾಸಿಗರನ್ನು ಮತ್ತೆ ನಗರಕ್ಕೆ ಆಕರ್ಷಿಸಲು ಉತ್ತಮ ರಸ್ತೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಣದ ಶೇಖರಣೆಗೆ ಮಹಾನಗರ ಪಾಲಿಕೆ ಏನಾದರೂ ಹೊಸ ತಂತ್ರ ರೂಪಿಸಬೇಕಾಗಿದೆ.