ವಿಜಯಪುರ: ಯುದ್ಧ ಪೀಡಿತ ಉಕ್ರೇನ್ನಿಂದ ಸುರಕ್ಷಿತವಾಗಿ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದ ವಿದ್ಯಾರ್ಥಿ ಸಿದ್ದು ಪೂಜಾರಿ ಉಕ್ರೇನ್ನಿಂದ ವಾಪಸಾಗಿ ಇಂದು ಮನೆ ಸೇರಿದ್ದಾರೆ.
ಮೆಡಿಕಲ್ ವಿದ್ಯಾರ್ಥಿಯಾಗಿರುವ ಸಿದ್ದು ಪೂಜಾರಿ ಉಕ್ರೇನ್ನ ಪಶ್ಚಿಮ ಭಾಗದಲ್ಲಿ ವಾಸಿಸುತ್ತಿದ್ದರು. ಮನೆಗೆ ವಾಪಸಾದ ಸಿದ್ದುಗೆ ಪೋಷಕರು ದೃಷ್ಟಿ ತೆಗೆದು ಮನೆಯೊಳಗೆ ಕರೆದುಕೊಂಡಿದ್ದಾರೆ. ಮನೆಯಲ್ಲಿ ಹಾಗೂ ಗ್ರಾಮದಲ್ಲಿ ಸಂತಸ ಮನೆ ಮಾಡಿದೆ.
ಉಕ್ರೇನ್ನಿಂದ ಮರಳಿದ ವಿದ್ಯಾರ್ಥಿ ಸಿದ್ದು ಪೂಜಾರಿ ಮಾತನಾಡಿ, ಕಳೆದ ಫೆಬ್ರುವರಿ 28 ರಂದು ಉಕ್ರೇನ್ ಬಿಟ್ಟು ರೊಮೇನಿಯಾ ದೇಶದ ಗಡಿ ತಲುಪಿದೆ. ಅಲ್ಲಿ ಮೂರು ದಿನಗಳ ಕಾಲ ಉಳಿದುಕೊಂಡೆ. ರೊಮೇನಿಯಾದಲ್ಲಿ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಊಟ ವಸತಿಯ ವ್ಯವಸ್ಥೆ ಮಾಡಿದರು. ರೊಮೇನಿಯಾದಿಂದ ಬಂದು ಮಾರ್ಚ್ 4ರಂದು ದೆಹಲಿ ತಲುಪಿದೆ. ನಂತರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿ ಇಂದು ನಮ್ಮೂರಿಗೆ ಬಂದಿದ್ದೇನೆ. ಸುರಕ್ಷತವಾಗಿ ತವರೂರು ಸೇರಿದ್ದಕ್ಕೆ ಸಂತೋಷವಾಗಿದೆ ಎಂದರು.
ಸಿದ್ದು ಪೂಜಾರಿ ಮನೆಗೆ ಬಸವನಬಾಗೇವಾಡಿ ತಹಶೀಲ್ದಾರ್ ವಿಜಯಕುಮಾರ್ ಕಡಕೋಳ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಇದನ್ನೂ ಓದಿ: ಉಕ್ರೇನ್ನಿಂದ ಬೆಂಗಳೂರಿಗೆ 9 ವಿದ್ಯಾರ್ಥಿಗಳ ಆಗಮನ