ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ವೃದ್ಧನೊಬ್ಬ ಸಾವನ್ನಪ್ಪಿದ್ದಾನೆ. ಈ ಮೂಲಕ ಸಾವಿಗೀಡಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ರೋಗಿ- 24790, 80 ವರ್ಷದ ವೃದ್ಧ ಜು. 4ರಂದು ಆಸ್ಪತ್ರೆಗೆ ದಾಖಲಾಗಿದ್ದ. ಈತ ಕೆಮ್ಮು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ. ಜುಲೈ 6ರಂದು ಈತನಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಜುಲೈ 7ರಂದು ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ. ಕೊರೊನಾ ನಿಯಮಾವಳಿ ಹಾಗೂ ಧಾರ್ಮಿಕ ಶಿಷ್ಟಾಚಾರದಂತೆ ಈಗಾಗಲೇ ಅಂತ್ಯಕ್ರಿಯೆಯನ್ನು ವಿಜಯಪುರ ಜಿಲ್ಲಾಡಳಿತ ಮಾಡಿದೆ.
ನಾಲ್ವರಲ್ಲಿ ಸೋಂಕು: ಜಿಲ್ಲೆಯಲ್ಲಿಂದು 4 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇಲ್ಲಿಯವರೆಗೆ 620 ಜನರಲ್ಲಿ ಸೋಂಕು ದೃಢಪಟ್ಟಿದೆ. 444 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಓರ್ವ ಮಹಿಳೆ ಹಾಗೂ ಮೂವರು ಪುರುಷರಿಗೆ ಸೋಂಕು ತಗುಲಿದೆ. ಇಬ್ಬರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದ್ದು, ಒಬ್ಬರು ಜ್ವರ, ನೆಗಡಿಯಿಂದ ಆಸ್ಪತ್ರೆಗೆ ದಾಖಲಾದ ಮೇಲೆ ಸೋಂಕು ದೃಢಪಟ್ಟಿದೆ. ಮಹಿಳೆ ರೋಗಿ-28330ರಿಂದ ಸೋಂಕು ತಗುಲಿದೆ. ಇನ್ನೂ 163 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 30,413 ಜನರ ಸ್ಯಾಂಪಲ್ ಪಡೆದುಕೊಳ್ಳಲಾಗಿದೆ. 28,467 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ 1326 ಜನರ ವರದಿ ಬರಬೇಕಿದೆ.