ವಿಜಯಪುರ: ಜಿಲ್ಲಾಸ್ಪತ್ರೆಯಲ್ಲಿ ಸಿಜೇರಿಯನ್ ಮಾಡಿಸಿಕೊಂಡ ಬಾಣಂತಿಯರ ಹೊಲಿಗೆ ಬಿಚ್ಚಿರುವ ಪ್ರಕರಣ ಸಂಬಂಧ ಜಿಲ್ಲಾಡಳಿತ ಸಮಗ್ರ ತನಿಖೆಗೆ ಆದೇಶಿಸಿತ್ತು. ಉಪ ವಿಭಾಗಾಧಿಕಾರಿ ನೇತೃತ್ವದ ತನಿಖಾ ತಂಡ ಜಿಲ್ಲಾಧಿಕಾರಿಗಳಿಗೆ ತನ್ನ ವರದಿ ಸಲ್ಲಿಸಿದೆ. ಈ ತನಿಖಾ ವರದಿಯಲ್ಲಿ ಹಲವಾರು ಪ್ರಮುಖ ಅಂಶಗಳನ್ನು ಪರಿಗಣಿಸಿರುವ ತನಿಖಾ ತಂಡ, ಈ ಆಸ್ಪತ್ರೆಯ ಸಾಮರ್ಥ್ಯಕ್ಕಿಂತ ಹೆಚ್ಚಿನ ಒತ್ತಡ ಬಿದ್ದಿದ್ದರಿಂದ, ಅತಿ ಹೆಚ್ಚು ರೋಗಿಗಳು ಸಿಜಿರಿಯನ್ಗೆ ಒಳಗಾಗಿದ್ದರಿಂದ ಇಂಥ ಘಟನೆ ನಡೆದಿದೆ ಪ್ರಮುಖವಾಗಿ ತಿಳಿಸಿದೆ. ಜೊತೆಗೆ ಒಂದೇ ಆಪರೇಷನ್ ಥಿಯೇಟರ್ ಇರುವುದು, ಕೆಲ ತಜ್ಞ ವೈದ್ಯರ ಕೊರತೆ ಇರುವುದು ಈ ಘಟನೆಗೆ ಕಾರಣ ಎಂದು ವರದಿಯಲ್ಲಿ ಹೇಳಿದೆ.
ಈಗಿರುವ ಒಂದೇ ಆಪರೇಷನ್ ಕೊಠಡಿಯನ್ನು ಶುಚಿಯಾಗಿ ಇಟ್ಟುಕೊಳ್ಳದಿರುವುದು ಒಂದು ಕಾರಣ ಎಂದು ವರದಿಯಲ್ಲಿ ತಿಳಿಸಿದೆ. ಜೊತೆಗೆ ಇನ್ನೂ ಹೆಚ್ಚಿನ ತಜ್ಞ ವೈದ್ಯರ ನೇಮಕಾತಿ, ಇನ್ನೊಂದು ಆಪರೇಷನ್ ಕೊಠಡಿ, ಅಗತ್ಯ ನರ್ಸ್ಗಳು, ಮೂಲ ಸೌಕರ್ಯಗಳನ್ನು ಒದಗಿಸುವಂತೆಯೂ ವರದಿಯಲ್ಲಿ ಸಲಹೆ ನೀಡಿದೆ.
ವರದಿ ಸಲ್ಲಿಕೆ ಯಾಗುತ್ತಲೇ ಉಪ ಲೋಕಾಯುಕ್ತ ಬಿ.ಎಸ್. ಪಾಟೀಲ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ, ಎಸ್.ಪಿ. ಸೇರಿದಂತೆ ಹಲವು ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಓಪಿಡಿ, ಲ್ಯಾಬ್, ಬಾಣಂತಿಯರ ವಾರ್ಡ್ಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಯಿತು.
ಆರು ತಿಂಗಳ ಹಿಂದಿನ ಕೇಸ್ಗಳ ಬಗ್ಗೆ ಅಂಕಿ-ಅಂಶ ಸಂಗ್ರಹ: ಬಳಿಕ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿ, ಬಾಣಂತಿಯರ ಹೊಲಿಗೆ ಬಿಚ್ಚಿದ್ದ ಕೇಸ್ ರಾಜ್ಯದ ತುಂಬೆಲ್ಲ ಸುದ್ದಿಯಾಗಿತ್ತು. ಇದು ನನ್ನ ಜಿಲ್ಲೆಯಾಗಿರುವುದರಿಂದ ನನಗೂ ಬೇಜಾರಾಯ್ತು. ಈ ಘಟನೆಗೆ ಕಾರಣವೇನು ಅನ್ನೋದರ ಬಗ್ಗೆ ಪರಿಶೀಲಿಸಲು ಬಂದಿದ್ದೆ. 21 ಬಾಣಂತಿಯರ ಹೊಲಿಗೆ ಬಿಚ್ಚಿತ್ತು ದೇವರ ದಯೆಯಿಂದ ಯಾರಿಗೂ ಏನೂ ಆಗಿಲ್ಲ. ಆಗಬಾರದ ಘಟನೆ ಆಗಿದೆ ಎಂದರು.
ಈಗಾಗಲೇ ಡಿಸಿಯವರು ರಿಪೋರ್ಟ್ ಡಾಟಾ ಕಲೆಕ್ಟ್ ಮಾಡಿದ್ದಾರೆ. ಆ ರಿಪೋರ್ಟ್ ಬಗ್ಗೆಯೂ ಚರ್ಚೆ ಮಾಡ್ತೀನಿ, ಕಾರಣವೇನು ಎಂಬಿತ್ಯಾದಿ ಮಾಹಿತಿ ಪಡೆದಿರುವೆ ಈ ಕುರಿತು ಕ್ರಮ ಜರುಗಿಸಲಾಗುವುದು ಎಂದರು.
ಒಟ್ಟಾರೆ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಹೊಲಿಗೆ ಬಿಚ್ಚಿದ ಪ್ರಕರಣ ಸಾಕಷ್ಟು ಸದ್ದು ಮಾಡಿದ್ದು, ಈಗಾಗಲೇ ತನಿಖಾ ವರದಿ ಸಹಿತ ಸಿದ್ದವಾಗಿ ವರದಿ ಕೂಡಾ ಸಲ್ಲಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಜಿಲ್ಲಾಡಳಿತ ಸಮಸ್ಯೆ ಬಗೆಹರಿಸುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ: ಸಾಮಾಜಿಕ ಜಾಲತಾಣದ ಒಂದು ಪೋಸ್ಟ್ನಿಂದ 18 ಲಕ್ಷ ರೂ. ಸಂಗ್ರಹ : ಮಗಳ ಜೀವ ಉಳಿಸಿಕೊಂಡ ತಾಯಿ!