ವಿಜಯಪುರ: ರಾಜ್ಯ ಸರ್ಕಾರದ 'ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ' ಕಾರ್ಯಕ್ರಮಕ್ಕೆ ಜಿಲ್ಲೆಯ ಹಿಪ್ಪರಗಿ ತಾಲೂಕಿನ ಬೊಮ್ಮನಜೋಗಿ ಗ್ರಾಮದಲ್ಲಿ ಉತ್ತಮ ಸ್ಪಂದನೆ ದೊರೆಯಿತು. ಈ ಸಂದರ್ಭದಲ್ಲಿ ಮನೆಗಾಗಿ ಮಹಿಳೆಯೊಬ್ಬರು ಡಿಸಿ ಕಾಲಿಗೆ ಬಿದ್ದ ಪ್ರಸಂಗ ನಡೆಯಿತು.
ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹಾಗೂ ಸಿಬ್ಬಂದಿ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು. ನಂತರ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಗ್ರಾಮದಲ್ಲಿ ಸುತ್ತಾಡಿದ ಡಿಸಿ ಜನರ ಸಮಸ್ಯೆಗಳನ್ನು ಖುದ್ದು ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮದ ಮಹಿಳೆ ಪಾರ್ವತಿ ಬಿರಾದಾರ ಎಂಬುವರು 10 ವರ್ಷದ ಹಿಂದೆ ನನ್ನ ಮನೆ ಸುಟ್ಟು ಹೋಗಿದೆ. ಇಲ್ಲಿಯವರೆಗೆ ಮನೆ ಇಲ್ಲ ಎಂದು ಕಣ್ಣೀರು ಹಾಕುತ್ತಲೇ ಡಿಸಿ ಹಾಗೂ ಪಿಡಿಒ ಕಾಲು ಮುಗಿದು ತಮ್ಮ ನೋವು ತೋಡಿಕೊಂಡರು.
ತಕ್ಷಣ ಮಹಿಳೆಯ ಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸ್ಥಳೀಯ ಅಧಿಕಾರಿಗಳಿಗೆ ಗ್ರಾಮ ಸಭೆಯಲ್ಲಿ ಮನೆ ನಿರ್ಮಾಣಕ್ಕೆ ಠರಾವು ಪಾಸ್ ಮಾಡಿ ಮನೆ ಕಟ್ಟಿಕೊಡುವಂತೆ ಸೂಚನೆ ನೀಡಿದರು.
ವಿದ್ಯಾರ್ಥಿಗಳ ಜೊತೆ ಸಮಾಲೋಚನೆ
ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ವಿದ್ಯಾರ್ಥಿಗಳಿಗೆ ಕಲಿಕಾ ಸಾಮರ್ಥ್ಯ ಕುರಿತು ಪ್ರಶ್ನೆಗಳನ್ನು ಕೇಳಿದರು. ನಂತರ ಗ್ರಾಮದಲ್ಲಿ ಕಾಲ್ನಡಿಗೆ ಮೂಲಕ ಸ್ವಚ್ಛತೆ ಪರಿಶೀಲನೆ ನಡೆಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಯಾವುದೇ ರೋಗ ಬಾರದಂತೆ ಮುನ್ನಚ್ಚರಿಕೆ ವಹಿಸಲು ಸೂಚಿಸಿದರು.
ಗ್ರಾಮಸ್ಥರಿಂದ ಅರ್ಜಿ ಸ್ವೀಕಾರ
ಸಮುದಾಯ ಭವನದಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ, ರೈತರ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸಲಾಗುವುದು. ಸರ್ಕಾರದ ಮಟ್ಟದ ಸಮಸ್ಯೆಗಳಿದ್ದರೆ ಸರ್ಕಾರಕ್ಕೆ ಮಾಹಿತಿ ನೀಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ಗ್ರಾಮಸ್ಥರಿಂದ ಬಂದ ಅರ್ಜಿಗಳ ವಿಲೇವಾರಿ ಜೊತೆಗೆ ಬಾಕಿ ಉಳಿದ ಅರ್ಜಿಗಳ ಬಗ್ಗೆ ಆದ್ಯತೆ ಮೇಲೆ ಪರಿಹಾರ ಕ್ರಮ ಕೈಗೊಳ್ಳಲಾಗುವದು ಎಂದರು.
55 ಕುಂದು ಕೊರತೆ ಅರ್ಜಿ ಸ್ವೀಕಾರ
ಈಗಾಗಲೇ ಫೆ.15 ರಂದು ಸುಮಾರು 55 ಕುಂದುಕೊರತೆ ಅರ್ಜಿಗಳನ್ನು ವಿವಿಧ ಸಮಸ್ಯೆಗಳಿಗೆ ಸಂಬಂಧ ಪಟ್ಟಂತೆ ಸ್ವೀಕರಿಸಲಾಗಿದೆ. ಸರ್ಕಾರದ ಆದೇಶದಂತೆ ಸಂಬಂಧಪಟ್ಟ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ, ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಈ 55 ಅರ್ಜಿಗಳ ಪೈಕಿ 19 ಕಂದಾಯ ಇಲಾಖೆಗೆ ಹಾಗೂ ಇತರೆ ಅರ್ಜಿಗಳು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳಾಗಿದ್ದು, ತಕ್ಷಣಕ್ಕೆ ಕೆಲವು ಸಮಸ್ಯೆಗಳನ್ನು ಪರಿಹರಿಸುವ ಜೊತೆಗೆ ಪ್ರಮಾಣ ಪತ್ರಗಳನ್ನು ನೀಡುವ ಕಾರ್ಯವನ್ನು ಅಧಿಕಾರಿಗಳು ಮಾಡಲಿದ್ದಾರೆ ಎಂದರು.
ಕಡುಬಡವರಿಗೆ ಮನೆ ನೀಡುವಂತೆ ಗ್ರಾ.ಪಂಗೆ ಮನವಿ
ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 20 ಮನೆಗಳ ಸೌಲಭ್ಯ ಕಲ್ಪಿಸಲು ವಸತಿ ಯೋಜನೆಯಡಿ ಅವಕಾಶವಿದೆ. ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ಲಾಟರಿ ಅಥವಾ ಕಡುಬಡವರಿಗೆ ಮನೆ ನಿರ್ಮಿಸಿಕೊಡುವ ಬಗ್ಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು. ಇಂದು ಪಿಂಚಣಿ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ 3 ಕುಂದುಕೊರತೆ ಅರ್ಜಿಗಳು, 8 ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೋರಿ,10 ರೈತರಿಂದ ಸ್ಪ್ರಿಂಕ್ಲರ್, 8 ಜನರ ಪಾವತಿ ಖಾತಾ ಸೇರಿದಂತೆ ವಿವಿಧ ಅರ್ಜಿಗಳನ್ನು ಸ್ವೀಕರಿಸಿದ್ದು, ಅವಶ್ಯಕ ಕ್ರಮ ಕೈಗೊಳ್ಳಲಾಗಿದೆ ಎಂದರು.