ವಿಜಯಪುರ : ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರ ಮುಂದೆ ಅಳಲು ತೋಡಿಕೊಂಡು ಬಂದ ಬಡ ವೃದ್ಧ ದಂಪತಿಗೆ ಒಂದೇ ಗಂಟೆಯೊಳಗೆ ವೃದ್ಧಾಪ್ಯ ವೇತನ ಮಂಜೂರು ಮಾಡುವ ಮೂಲಕ ಡಿಸಿ ಮಾನವೀಯತೆ ಮೆರೆದಿದ್ದಾರೆ. ಬಡತನ ರೇಖೆಗಿಂತ (ಬಿಪಿಎಲ್) ಕೆಳಗಡೆ ಇರುವ ಮತ್ತು 60 ವರ್ಷ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರಿಗೆ ಈ ಯೋಜನೆಯಡಿ ಮಾಸಾಶನ ನೀಡಲಾಗುತ್ತದೆ.
ನಗರದ ಗ್ಯಾಂಗಬಾವಡಿಯ ನಿವಾಸಿಗಳಾದ ಸೂರ್ಯಕಾಂತ ರಾಮದುರ್ಗಕರ ಹಾಗೂ ಅವರ ಪತ್ನಿ ಸುರೇಖಾ ರಾಮದುರ್ಗಕರ ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ, ತಮ್ಮ ಜೀವನೋಪಾಯಕ್ಕೆ ಆಸರೆ ಒದಗಿಸಲು ಮನವಿ ಮಾಡಿಕೊಂಡಾಗ, ಖುದ್ದು ಜಿಲ್ಲಾಧಿಕಾರಿಗಳು ಅವರ ದೂರು ಆಲಿಸಿ ಸ್ಥಳದಲ್ಲಿಯೇ ಬಡ ವೃದ್ಧ ದಂಪತಿಗೆ ಪಿಂಚಣಿ ಮಂಜೂರು ಮಾಡಿಸುವ ಮೂಲಕ ಮಾನವೀಯತೆ ಮೆರೆದರು.
"ಸರ್ಕಾರದ ಪಿಂಚಣಿ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಕ್ಕಾಗಿ ಜಿಲ್ಲೆಯ ಯಾವುದೇ ಫಲಾನುಭವಿಗಳು ಕಚೇರಿಗಳಿಗೆ ಅಲೆದಾಡುವಂತಾಗಬಾರದು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಿ ಅರ್ಹ ಫಲಾನುಭವಿಗಳಿಗೆ ಹಾಗೂ ಅವಶ್ಯಕತೆ ಇರುವವರಿಗೆ ಸರ್ಕಾರದ ಸೌಲಭ್ಯಗಳು ದೊರಕಿಸಲು ಕ್ರಮ ವಹಿಸುವಂತೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿವಿಧ ಪಿಂಚಣಿ ಯೋಜನೆಗಳಾಗಿ ಅರ್ಹರು ತಾಲೂಕು ತಹಶೀಲ್ದಾರ್ ಅವರನ್ನು ಸಂಪರ್ಕಿಸಬೇಕು. ಜಿಲ್ಲಾದ್ಯಂತ ಪಿಂಚಣಿ ಅದಾಲತ್‍ಗಳನ್ನು ಆಯೋಜಿಸುವ ಮೂಲಕ ಅರ್ಹರಿಗೆ ಸೌಲಭ್ಯ ದೊರಕಿಸಲು ಪ್ರಯತ್ನಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು" ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್
ತಿಳಿಸಿದ್ದಾರೆ.
ಇದನ್ನೂ ಓದಿ : ರಕ್ತ ಕೊಟ್ಟೆವು - ಪಿಂಚಣಿ ಬಿಡೆವು ; ಮತ್ತೊಮ್ಮೆ ಬೀದಿಗಿಳಿದ ಅನುದಾನಿತ ಶಾಲಾ - ಕಾಲೇಜು ನೌಕರರು
ಪಿಂಚಣಿ ಪಡೆಯಲು ಹರಸಾಹಸ : ಇನ್ನು ಪಿಂಚಣಿ ಪಡೆಯಲು ವೃದ್ಧೆಯನ್ನು ಆಕೆಯ ಪತಿ ಹಾಗೂ ಮಗ ಕವಡಿಯಲ್ಲಿ ಕುರಿಸಿಕೊಂಡು ಕಚೇರಿಗೆ ಕೆರೆ ತಂದಿರುವ ಮನಕಲಕುವ ಘಟನೆ ಕಳೆದ ಮೇ ತಿಂಗಳಲ್ಲಿ ಜಾರ್ಖಂಡ್ನ ಲತೇಹಾರ್ನಲ್ಲಿ ನಡೆದಿತ್ತು. ಇಲ್ಲಿನ ಬುಡಕಟ್ಟು ಕುಟುಂಬದ ವೃದ್ಧೆಯೊಬ್ಬರು ಪಿಂಚಣಿ ಪಡೆಯಲು ಆಕೆಯ ಪತಿ ಹಾಗೂ ಮಗ ಅವರನ್ನು ಕವಡಿಯಲ್ಲಿ ಕುರಿಸಿಕೊಂಡು ಮಹುವದಂಡ್ ಬ್ಲಾಕ್ ಕೇಂದ್ರಕ್ಕೆ ಕರೆತಂದಿದ್ದರು. ಗ್ರಾಮದಲ್ಲಿ ರಸ್ತೆ ನಿರ್ಮಾಣವಾಗದೇ ಇರುವುದೇ ಈ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದರು.
ಇದನ್ನೂ ಓದಿ : ಪಿಂಚಣಿ ಪಡೆಯಲು ವೃದ್ಧೆಯನ್ನು ಕವಡಿಯಲ್ಲಿ ಕಚೇರಿಗೆ ಕರೆತಂದ ತಂದೆ , ಮಗ : ವಿಡಿಯೋ ವೈರಲ್
ಹಾಗೆಯೇ, ಸಾಮಾಜಿಕ ಭದ್ರತಾ ಪಿಂಚಣಿ ಪಡೆಯಲು ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಆಗಮಿಸಿದ್ದ ವೇಳೆ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದ ಹೊಸನಗರ ತಾಲೂಕು ಹೆಬ್ಬಿಗೆ ಗ್ರಾಮದ ಸಾಧಮ್ಮ ಎಂಬುವರ ಮನೆಗೆ ತಹಶೀಲ್ದಾರ್ ವಿ ಎಸ್ ರಾಜೀವ್ 2022 ರ ಜೂನ್ 22 ರಂದು ತೆರಳಿ ಪಿಂಚಣಿ ಮಂಜೂರಾತಿ ಪತ್ರವನ್ನು ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದರು.
ಇದನ್ನೂ ಓದಿ : ವೃದ್ಧೆ ಮನೆಗೆ ತೆರಳಿ ಪಿಂಚಣಿ ಮಂಜೂರು ಪತ್ರ ಹಸ್ತಾಂತರಿಸಿದ ತಹಶೀಲ್ದಾರ್