ವಿಜಯಪುರ : ಮಾರ್ಚ್ 09 ರಿಂದ ಮಾರ್ಚ್ 29ರ ವರೆಗೆ ಜಿಲ್ಲೆಯ 56 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತಿಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗಳು ವ್ಯವಸ್ಥಿತ ಹಾಗೂ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅವರಿಂದು ಅಧಿಕಾರಿಗಳೊಂದಿಗೆ ಪೂರ್ವಸಿದ್ಧತಾ ಸಭೆ ನಡೆಸಿದರು.
ಈ ಸಭೆಯ ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ಪರೀಕ್ಷೆಗೆ ಒಟ್ಟು 32,268 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 30,178 ಅಭ್ಯರ್ಥಿಗಳು ಪ್ರಸಕ್ತ ಸಾಲಿಗೆ ಹಾಗೂ 1,140 ಅಭ್ಯರ್ಥಿಗಳು ಪುನರಾವರ್ತಿತ ಅಭ್ಯರ್ಥಿಗಳಿದ್ದಾರೆ. ಜಿಲ್ಲೆಯಲ್ಲಿ 6 ಸರಕಾರಿ ಪರೀಕ್ಷಾ ಕೇಂದ್ರಗಳು, 32 ಖಾಸಗಿ ಅನುದಾನಿತ, 18 ಖಾಸಗಿ ಅನುದಾನರಹಿತ ಪರೀಕ್ಷಾ ಕೇಂದ್ರಗಳೂ ಸೇರಿದಂತೆ ಒಟ್ಟು 56 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಗರ ಪ್ರದೇಶದಲ್ಲಿ 34 ಹಾಗೂ ಗ್ರಾಮೀಣ ಪ್ರದೇಶದಲ್ಲಿ 22 ಪರೀಕ್ಷಾ ಕೇಂದ್ರಗಳಿವೆ. ಕಳೆದ ಸಾಲಿಗೆ ಹೋಲಿಸಿದಲ್ಲಿ ಈ ಬಾರಿ 3 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
ತಾಲೂಕಾವಾರು ಪರೀಕ್ಷಾ ಕೇಂದ್ರಗಳು: ಆಲಮೇಲ ತಾಲೂಕಿನಲ್ಲಿ -02, ಬಬಲೇಶ್ವರ-01, ಬಸವನ ಬಾಗೇವಾಡಿ-04, ಚಡಚಣ-02, ದೇವರಹಿಪ್ಪರಗಿ-02, ಇಂಡಿ-07, ಕೊಲ್ಹಾರ-01, ಮುದ್ದೇಬಿಹಾಳ-05, ನಿಡಗುಂದಿ-02, ಸಿಂದಗಿ-05, ತಾಳಿಕೋಟೆ-05, ತಿಕೋಟಾ-02, ವಿಜಯಪುರ ನಗರ-15 ಹಾಗೂ ಗ್ರಾಮೀಣ-03 ಪರೀಕ್ಷಾ ಕೇಂದ್ರಗಳಿವೆ.
ಮುಂಜಾಗ್ರತಾ ಕ್ರಮಕ್ಕೆ ಡಿಸಿ ಸೂಚನೆ: ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಅನುಕೂಲಕ್ಕಾಗಿ ಕುಡಿಯುವ ನೀರು, ವಿದ್ಯುತ್ ಸೌಕರ್ಯ, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳ ಕುರಿತು ಮುಂಚಿತವಾಗಿ ಪರಿಶೀಲನೆ ಮಾಡಬೇಕು. ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.
ಪರೀಕ್ಷೆಗಳು ಅತಿ ಸೂಕ್ಷ್ಮವಾದ ಪ್ರಕ್ರಿಯೆ. ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಅವಧಿಯೊಳಗೆ ತಲುಪಿಸಬೇಕು. ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಹೋಗುವ ವಾಹನಗಳಿಗೆ ಜಿಪಿಎಸ್ ಅಳವಡಿಕೆ, ನಿಗದಿತ ಮಾರ್ಗದಲ್ಲೇ ನಿಖರ ಸಮಯಕ್ಕೆ ತಲುಪಿಸಬೇಕು. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿ ಮತ್ತು ಸಿಬ್ಬಂದಿಗೆ ಗುರುತಿನ ಚೀಟಿ ನೀಡಬೇಕು ಎಂದು ನಿರ್ದೇಶನ ನೀಡಿದರು.
ಒಂದು ಕೊಠಡಿಯಲ್ಲಿ ಕನಿಷ್ಠ 24 ರಿಂದ ಗರಿಷ್ಠ 30 ವಿದ್ಯಾರ್ಥಿಗಳಿರುವಂತೆ ಆಸನ ವ್ಯವಸ್ಥೆ ಕಲ್ಪಿಸಬೇಕು. ಪರೀಕ್ಷೆಗೆ ನಿಯೋಜಿತವಾದ ಅಧಿಕಾರಿ, ಸಿಬ್ಬಂದಿ ಪರೀಕ್ಷೆಯ ನಿಗದಿತ ಸಮಯಕ್ಕೆ ಮುಂಚಿತವಾಗಿ ಹಾಜರಿರಬೇಕು. ಪ್ರಶ್ನೆ ಪತ್ರಿಕೆ ಸ್ವೀಕರಿಸುವ ತೆರೆಯುವ ಮತ್ತು ವಿತರಿಸುವ ಎಲ್ಲ ಪ್ರಕ್ರಿಯೆಗಳು ಸಿಸಿಟಿವಿ ಕಣ್ಗಾವಲಿನಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ಕೊಟ್ಟರು.
ಪ್ರಶ್ನೆ ಪತ್ರಿಕೆ ಸೆಂಟರ್ ಕೋಡ್, ದಿನಾಂಕ, ಸೀಲ್ ಪ್ಯಾಕಿಂಗ್ ಪರಿಶೀಲಿಸಿ ಖಚಿತಪಡಿಸಿಕೊಳ್ಳಿ. ಎಲ್ಲಾ ಕೊಠಡಿಗಳಿಗೆ ಸಿಸಿಟಿವಿ ಕ್ಯಾಮರಾ ಕಡ್ಡಾಯ. ನಿಯೋಜಿತ ಸಿಬ್ಬಂದಿ ಹೊರತುಪಡಿಸಿ, ಬೇರೆಯವರಿಗೆ ಪ್ರವೇಶ ನಿಷೇಧವಿದೆ. ಪ್ರಶ್ನೆ ಪತ್ರಿಕೆ ಪ್ರಮಾಣ ಸರಿಯಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡ ನಂತರ ವಿತರಿಸಬೇಕು. ವ್ಯತ್ಯಾಸ ಕಂಡುಬಂದಲ್ಲಿ ಕೂಡಲೇ ಮುಖ್ಯ ಅಧೀಕ್ಷಕರಿಗೆ ಮಾಹಿತಿ ಒದಗಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಖಜಾನೆ ಇಲಾಖೆ ಉಪ ನಿರ್ದೇಶಕ ರಾಜಗೋಪಾಲ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎನ್.ಬಗಲಿ, ಡಿವೈಎಸ್ಪಿ ಸಿದ್ದೇಶ್ವರ, ಜಿಲ್ಲೆಯ ಎಲ್ಲ ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಪ್ರಶ್ನೆ ಪತ್ರಿಕೆ ವಿತರಣಾ ತಂಡದ ಪ್ರಾಚಾರ್ಯರು ಹಾಗೂ ಉಪನ್ಯಾಸಕರು, ಪರೀಕ್ಷಾ ಉಪ ಮುಖ್ಯ ಅಧೀಕ್ಷಕರು ಉಪಸ್ಥಿತರಿದ್ದರು.
ಇದನ್ನೂ ಓದಿ: ಎಸ್ಎಸ್ಎಲ್ಸಿ, ಪಿಯುಸಿ ಮುಖ್ಯ ಪರೀಕ್ಷೆಗೆ ಭದ್ರತೆ: ಸಭೆ ನಡೆಸಿ ಚರ್ಚಿಸಿದ ಶಿಕ್ಷಣ ಸಚಿವರು