ವಿಜಯಪುರ: ಮುಂಬರುವ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬಗಳನ್ನು ಕೋವಿಡ್ ಹಿನ್ನೆಲೆಯಲ್ಲಿ ಅತ್ಯಂತ ಜಾಗೃತಿಯಿಂದ ಹಾಗೂ ಸರ್ಕಾರದ ಪರಿಷ್ಕತ ಮಾರ್ಗಸೂಚಿಗಳನ್ವಯ ಆಚರಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಸಾರ್ವಜನಿಕರು, ಶ್ರೀ ಗಣೇಶ ಉತ್ಸವ ಮಂಡಳಿಗಳು ಮತ್ತು ಮುಸ್ಲಿಂ ಬಾಂಧವರಿಗೆ ಮನವಿ ಮಾಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗಣೇಶ ಹಬ್ಬ ಆಚರಣೆ ಮತ್ತು ಮೊಹರಂ ಹಬ್ಬದ ಆಚರಣೆ ಕುರಿತಂತೆ ನಡೆದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಇದೇ ಆಗಸ್ಟ್ 22 ರಿಂದ ಆಚರಿಸಲಾಗುವ ಗಣೇಶ ಹಬ್ಬ ಮತ್ತು ಆಗಸ್ಟ್ 30 ರಂದು ಆಚರಿಸಲಾಗುವ ಮೊಹರಂ ಹಬ್ಬಗಳನ್ನು ಸರಳವಾಗಿ, ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಿಸುವಂತೆ ಸಲಹೆ ನೀಡಿದ್ದಾರೆ.
ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಗಣೇಶ ಮಂಡಳಿಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಅನುಮತಿ ಮತ್ತು ಎನ್‍ಒಸಿ ಪಡೆಯಬೇಕು. ಅನುಮತಿಗೆ ಈ ಬಾರಿ ಯಾವುದೇ ಶುಲ್ಕ ಪಡೆಯುವದಿಲ್ಲ. ಆದರೆ ಗಣೇಶ ವಿಸರ್ಜನೆ ದಿನಗಳಾದ ಒಂದನೇ ದಿನಕ್ಕೆ 200 ರೂ., ಐದನೇ ದಿನಕ್ಕೆ 760 ರೂ, ಏಳನೇ ದಿನಕ್ಕೆ 1,040 ರೂ, ಒಂಭತ್ತನೆ ದಿನಕ್ಕೆ 1,320 ರೂ. ಹಾಗೂ ಹನ್ನೊಂದನೇ ದಿನಕ್ಕೆ 1,600 ರೂ.ಗಳನ್ನು ಗಣೇಶ ವಿಸರ್ಜಿಸುವಂತಹ ಮಂಡಳಿಗಳು ವಿದ್ಯುತ್ ಬಿಲ್ ಚಲನ್‍ಗಳನ್ನು ತಕ್ಷಣ ಭರಿಸುವಂತೆ ಅವರು ಸೂಚನೆ ನೀಡಿದ್ದಾರೆ.
ಗಣೇಶ ಮಂಡಳಿಗಳು ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಪ್ರಯತ್ನಿಸಬೇಕು. ಪೆಂಡಾಲ್‍ದಲ್ಲಿ ಕಡ್ಡಾಯವಾಗಿ 24*7 ಕಾರ್ಯಕರ್ತರು ಇರುವಂತೆ ನೋಡಿಕೊಳ್ಳಬೇಕು. ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ಸೂಕ್ತ ಸ್ಯಾನಿಟೈಜರ್ ಮತ್ತು ಸ್ಯಾನಿಟೈಜೇಶನ್ ವ್ಯವಸ್ಥೆಯೊಂದಿಗೆ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡಬೇಕು. ಗಣೇಶ ಮಂಡಳಿಗಳ ಕಾರ್ಯಕರ್ತರ ಮಾಹಿತಿಯನ್ನು ಗಣೇಶ ವಿಸರ್ಜನೆ ದಿನ ನಮೂದಿಸಿ ನೀಡಬೇಕು. ಸರ್ಕಾರದ ನಿರ್ದೇಶನದಂತೆ ಅಷ್ಟೇ ಗಾತ್ರದ ಗಣೇಶ ಪ್ರತಿಷ್ಠಾಪಿಸಬೇಕು.
ಮನೆಗಳಲ್ಲಿ ಪ್ರತಿಷ್ಠಾಪಿಸುವಂತಹ ಗಣೇಶ ಮೂರ್ತಿಗಳನ್ನು ಮನೆ ಆವರಣದಲ್ಲಿ ವಿಸರ್ಜಿಸಲು ಕ್ರಮಕೈಗೊಳ್ಳಬೇಕು. ಈ ಬಾರಿ ಶ್ರೀ ಗಣೇಶ ಹಬ್ಬ ಮತ್ತು ಮೊಹರಂ ಹಬ್ಬಗಳ ಮೆರವಣಿಗೆಗಳಿಗೆ ಅವಕಾಶವಿರುವುದಿಲ್ಲ. ಆದರೆ ನಿಗದಿತ ಮೂರ್ತಿ ಮತ್ತು ಮೊಹರಂ ಪಂಜಾ-ತಾಜಿಯಾ ಪ್ರತಿಷ್ಠಾಪನಾ ಸ್ಥಳಗಳಲ್ಲಿ 20ಕ್ಕಿಂತ ಹೆಚ್ಚು ಸೇರದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಮಾತನಾಡಿ, ಶತಮಾನದ ಮಹಾಮಾರಿ ಕೊರೋನಾ ಆಗಿರುವುದರಿಂದ ಕೋವಿಡ್-19 ಮುನ್ನೆಚ್ಚರಿಕೆ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲಾಗುವುದು. ಸಂಗೀತ ವಾದ್ಯಕ್ಕೆ ನಿಷೇಧವಿದ್ದು, ಶ್ರದ್ಧಾಭಕ್ತಿಯಿಂದ ಆಚರಿಸಬೇಕು. ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
ಗಣೇಶ ಮಂಡಳಿಗಳು ಪ್ರಚೋದನಾಕಾರಿ ಗೀತೆಗಳನ್ನು ಪ್ರಸಾರವಾಗದಂತೆ ಎಚ್ಚರಿಕೆ ವಹಿಸಬೇಕು. ಗ್ರಾಮ ಮತ್ತು ಊರುಗಳ ಜನರು ಕೈಜೋಡಿಸಿ ಈ ಎರಡು ಹಬ್ಬಗಳನ್ನು ಆಚರಿಸಬೇಕು. ಆಯಾ ತಾಲೂಕಾ ತಹಸೀಲ್ದಾರರು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಕೂಡ ತಮ್ಮ ಜೊತೆಗಿರಲಿದ್ದು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸೂಕ್ತ ಸಹಕಾರ ನೀಡುವಂತೆ ಮನವಿ ಮಾಡಿದರು.
ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಮಾತನಾಡಿ, ಸಾರ್ವಜನಿಕ ಗಣೇಶ ವಿಸರ್ಜನೆಗೆ ಕೃತಕ ಹೊಂಡಗಳನ್ನು ನಿರ್ಮಿಸಲಾಗುವುದು. ಗಾಂಧಿಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನುಮತಿಗಾಗಿ ಐದು ಕೌಂಟರ್ಗಳನ್ನು ನಿರ್ಮಿಸಲಾಗುವುದು. ಸಹಾಯವಾಣಿ ನಂಬರ್ ಮತ್ತು ವಾಹನದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಜಿಪಂ ಸಿಇಒ ಗೋವಿಂದ ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಿಸಿದ್ಧಿ, ಡಿವೈಎಸ್ಪಿ ಲಕ್ಷ್ಮೀನಾರಾಯಣ, ಸಮಾಜದ ಮುಖಂಡರಾದ ಅಡಿವೆಪ್ಪ ಸಾಲಗಲ್ ಸೇರಿದಂತೆ ಶ್ರೀ ಗಣೇಶ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.