ವಿಜಯಪುರ: ಹಲಸಂಗಿ ಗೆಳೆಯರ ಬಳಗ ಪ್ರತಿಷ್ಠಾನದ ಪ್ರಸಕ್ತ ವರ್ಷದ ಯೋಜನೆಯನ್ನು ರೂಪಿಸುವಂತೆ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಹಲಸಂಗಿ ಗೆಳೆಯರ ಬಳಗ ಪ್ರತಿಷ್ಠಾನದ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಹಲಸಂಗಿ ಗೆಳೆಯರ ಬಳಗ ಪ್ರತಿಷ್ಠಾನದಿಂದ ನಮ್ಮ ನಾಡಿನ ಕವಿಗಳ ಹಾಗೂ ಸಾಹಿತ್ಯದ ಆಸಕ್ತಿ ಮೂಡಿಸುವಂತಾಗಬೇಕು. ಈ ಕುರಿತಾಗಿ ಸಮಗ್ರ ಕ್ರಿಯಾ ಯೋಜನೆಯನ್ನು ರೂಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಯೋಜನೆಗೆ ಬೇಕಾದ ಕೃತಿಗಳ ಮುದ್ರಣ ಹಾಗೂ ಕಾವ್ಯ, ಜಾನಪದ ವಿಮರ್ಶೆ ಗ್ರಂಥ ಬಿಡುಗಡೆ, ವಿಚಾರ ಸಂಕಿರಣ ಸೇರಿದಂತೆ ಉಪನ್ಯಾಸ ಕಾರ್ಯಕ್ರಮ, ಸದಸ್ಯರ ಭತ್ಯೆ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಾಟೀಲ್ ಸೂಚಿಸಿದರು.
ಇನ್ನು ಪ್ರತಿಷ್ಠಾನದ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಮನ ಮನಮುಟ್ಟುವಂತೆ ಆಗಬೇಕು. ಈ ನಿಟ್ಟಿನಲ್ಲಿ ಪ್ರತಿಷ್ಠಾನದಿಂದ ಮುದ್ರಣವಾಗುವ ಪುಸ್ತಕಗಳು ಜಿಲ್ಲೆಯ ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳಿಗೆ ಕಳಿಸುವ ವ್ಯವಸ್ಥೆ ಮಾಡಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಸಾಹಿತ್ಯಾಸಕ್ತಿ ಬೆಳೆಯುತ್ತದೆ ಎಂದರು. ವಿದ್ಯಾರ್ಥಿಗಳಿಗೆ ಶೇ. 50 ರಷ್ಟು ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮಾಡಬೇಕು. ವಿವಿಧ ಗ್ರಂಥಾಲಯಗಳಲ್ಲಿ ಪ್ರತಿಷ್ಠಾನದ ಪುಸ್ತಕಗಳು ದೊರೆಯುವಂತಾಗಬೇಕು. ಮುದ್ರಿಕೆಗಳನ್ನು ಡಿಜಿಟಲೀಕರಣಗೊಳಿಸುವ ಪ್ರಯತ್ನ ಹಲಸಂಗಿ ಗೆಳೆಯರ ಬಳಗದಿಂದ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ವರ್ಷವೂ ಮಧುರಚೆನ್ನರ ಸ್ವಗ್ರಾಮ ಹಲಸಂಗಿಯಲ್ಲಿ ಹತ್ತು ದಿನಗಳ ಕಾಲ ನಾಡಹಬ್ಬವನ್ನು ಆಚರಿಸಲಾಗುತ್ತಿದ್ದು, ಜಿಲ್ಲಾಡಳಿತ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಳ್ಳಲಿದೆ. ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ ಪೋದ್ದಾರ್, ಅಕ್ಕಮಹಾದೇವಿ ಮಹಿಳಾ ವಿವಿಯ ಹಂಗಾಮಿ ಕುಲಪತಿ ಓಂಕಾರ ಕಾಕಡೆ, ಎಸ್.ಕೆ. ಕೊಪ್ಪ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಪ್ರತಿಷ್ಠಾನದ ಸದಸ್ಯರು ಭಾಗಿಯಾಗಿದ್ದರು.