ವಿಜಯಪುರ: ಪರಿಶಿಷ್ಟ ಸಮುದಾಯದ ಯುವಕನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಭೀಮ್ ಆರ್ಮಿ ಸಂಘಟನೆ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಮೇ 29 ರಂದು ಆಕಾಶ ಎಂಬ ಯುವಕ ಬಸವನ ಬಾಗೇವಾಡಿಯಿಂದ ಹಿಟ್ಟಿನಳ್ಳಿಗೆ ಬರುವ ಮಾರ್ಗದಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಕೆಲವು ಪುಂಡರು ಬಂದು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ವೇಳೆ ಜಾತಿ ನಿಂದನೆಯನ್ನೂ ಮಾಡಿದ್ದರು ಎಂಬ ಮಾಹಿತಿ ಇದೆ. ಈ ಕುರಿತು ದೂರು ದಾಖಲಾಗಿದ್ದು, ಒಬ್ಬ ಆರೋಪಿಯನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ ಎಂದು ಭೀಮ್ ಆರ್ಮಿ ಕಾರ್ಯಕರ್ತರು ಆರೋಪಿಸಿದರು.
ಈ ಘಟನೆಗೆ ಸಂಬಂಧಿಸಿದಂತೆ ಇನ್ನುಳಿದ ಆರೋಪಿಗಳನ್ನು ಜಿಲ್ಲಾಡಳಿತ ಬಂಧಿಸಬೇಕು. ದೂರು ಹಿಂಪಡೆಯುವಂತೆ ಹಲ್ಲೆಗೊಳಗಾದ ಯುವಕನಿಗೆ ಕೆಲವರು ಬೆದರಿಕೆ ಹಾಕುತ್ತಿದ್ದು, ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.