ವಿಜಯಪುರ:ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಇತ್ತೀಚೆಗೆ ಬಾಣಂತಿಯರ ಸಿಜಿರಿನ್ ಹೊಲಿಗೆ ಬಿಚ್ಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಮೇ 17 ರಂದು ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ 21 ಬಾಣಂತಿಯರ ಸಿಜಿರಿನ್ ಹೊಲಿಗೆ ಬಿಚ್ಚಿಕೊಂಡು ಸೋಂಕು ಕಾಣಿಸಿಕೊಂಡಿತ್ತು. ಅದಕ್ಕಾಗಿ ಉಪ ಲೋಕಾಯುಕ್ತ ಬಿ.ಎಸ್. ಪಾಟೀಲ ಭೇಟಿ ನೀಡಿ ಪರಿಶೀಲನೆ ಕೂಡಾ ನಡೆಸಿದ್ದರು. ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಯು/ಎಸ್, 7(2) ಮತ್ತು 9(3)(ಎ) ಅಡಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜಕುಮಾರ ಯರಗಲ್, ಶಸ್ತ್ರಚಿಕಿತ್ಸಕ ಡಾ.ಸಂಗಣ್ಣ ಲಕ್ಕಣ್ಣವರ, ರೆಸಿಡೆಂಟ್ ಮೆಡಿಕಲ್ ಆಫೀಸರ್ ಡಾ.ಎ.ಜಿ.ಬಿರಾದಾರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅನುಸರಣಾ ವರದಿ ನೀಡುವಂತೆ ಆದೇಶಿಸಿರುವುದಾಗಿ ಲೋಕಾಯುಕ್ತ ಪೊಲೀಸ್ ನಿರೀಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಿಜಿರಿನ್ ಮಾಡಿಸಿಕೊಂಡ ಬಾಣಂತಿಯರು ರಕ್ತಸ್ರಾವ ಸಮಸ್ಯೆ ಜೊತೆ ಹಾಕಿದ ಹೊಲಿಗೆ ಕಳಚಿಕೊಳ್ಳುತ್ತಿರುವುದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಇಷ್ಟಾದರೂ ಸಿಬ್ಬಂದಿ ಮಾತ್ರ ಕ್ಯಾರೆ ಎನ್ನದ ಹಿನ್ನೆಲೆಯಲ್ಲಿ ಭಾರಿ ಸುದ್ದಿಯಾಗಿತ್ತು. ಆ ಬಳಿಕ ಈ ಸಂಬಂಧ ತನಿಖೆಗೆ ಆದೇಶಿಸಲಾಗಿತ್ತು. ಜೊತೆಗೆ ಲೋಕಾಯುಕ್ತರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು.
(ಇದನ್ನೂ ಓದಿ: ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರಿಗೆ ಸಂಕಷ್ಟ.. ಆಪರೇಷನ್ ಹೊಲಿಗೆ ಕಳಚಿ ನರಳಾಟ)