ವಿಜಯಪುರ : ಸ್ನೇಹಿತರ ಜತೆ ದಾಬಾಗೆ ಊಟಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ವಿಜಯಪುರ ತಾಲೂಕಿನ ದ್ಯಾಬೇರಿಕೆರೆಯಲ್ಲಿ ನಡೆದಿದೆ. ಈ ಸಾವಿಗೆ ಕೆರೆಯಲ್ಲಿ ಈಜುವುದಾಗಿ ಹೇಳಿ ಸ್ನೇಹಿತರ ಜತೆ ಬೆಟ್ಟಿಂಗ್ ಕಟ್ಟಿದ್ದೆ ಕಾರಣ ಎಂಬ ಮಾತು ಗ್ರಾಮದಲ್ಲಿ ಕೇಳಿ ಬರುತ್ತಿದೆ. ಆದರೆ, ಮೃತನ ಕುಟುಂಬಸ್ಥರು ಆತನನ್ನು ಕೊಲೆ ಮಾಡಿ ಕೆರೆಯಲ್ಲಿ ಎಸೆದಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ದ್ಯಾಬೇರಿ ಗ್ರಾಮದ ಕೆರೆಯಲ್ಲಿ ಇಂದು ವ್ಯಕ್ತಿಯೊಬ್ಬನ ಶವ ಹುಡುಕಾಟಕ್ಕಾಗಿ ಅಗ್ನಿಶಾಮಕ ದಳ ಬೆಳಗ್ಗೆಯಿಂದ ಸತತ ಪ್ರಯತ್ನ ನಡೆಸಿದ್ದರು. ಆದರೆ, ಮಧ್ಯಾಹ್ನ ಆ ಮೃತ ದೇಹ ತಾನಾಗಿಯೇ ತೇಲಿ ಬಂದಿತ್ತು. ಮೃತ ವ್ಯಕ್ತಿ ಪ್ರಕಾಶ ರಾಮು ಮೋರೆ (46) ಎಂದು ಗುರುತಿಸಲಾಗಿದೆ.
ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿ ತನ್ನ ನಾಲ್ಕು ಮಕ್ಕಳು ಮತ್ತು ಪತ್ನಿ ಜತೆ ಸಂಸಾರ ನಡೆಸುತ್ತಿದ್ದನು. ನಿನ್ನೆ ಭಾನುವಾರ ಆತನ ನಾಲ್ಕು ಸ್ನೇಹಿತರ ಜತೆ ಮದಭಾವಿ ಗ್ರಾಮದ ದಾಬಾಗೆ ಊಟ ಮಾಡಲು ಹೋಗಿದ್ದರು. ನಂತರ ಸಂಜೆ ಪ್ರಕಾಶ ಮೋರೆ ಕೆರೆಯಲ್ಲಿ ಬಿದ್ದಿದ್ದಾನೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು.
ಓದಿ: ಐಪಿಎಲ್ ಬೆಟ್ಟಿಂಗ್ ದಂಧೆ: ಇಬ್ಬರ ಬಂಧನ, 13 ಮಂದಿ ವಿರುದ್ಧ ಪ್ರಕರಣ ದಾಖಲು
ನಿನ್ನೆ ರಾತ್ರಿ ಪ್ರಕಾಶನನ್ನು ಕೆರೆಯಲ್ಲಿ ಹುಡುಕಿದರು ಸಿಕ್ಕಿಲ್ಲ. ಇಂದು ಮಧ್ಯಾಹ್ನ ಆತನ ಶವ ದೊರಕುತ್ತಿದ್ದಂತೆ ಮೃತನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಆತನ ಪತ್ನಿ, ಸಹೋದರ ಇದೊಂದು ಕೊಲೆಯಾಗಿದೆ. ಊಟಕ್ಕೆ ಕರೆದುಕೊಂಡು ಹೋದವರು ಗ್ರಾಮಕ್ಕೆ ಬರೋದು ಬಿಟ್ಟು ಕೆರೆಗೆ ಏಕೆ ಕರೆದುಕೊಂಡು ಹೋಗಿದ್ದಾರೆ. ಇದರಲ್ಲಿ ಬೆಟ್ಟಿಂಗ್ ನಡೆದಿರುವ ಬಗ್ಗೆ ತಮಗೆ ಏನು ಗೊತ್ತಿಲ್ಲ. ಆತನ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಆದರೆ, ಗ್ರಾಮದಲ್ಲಿ ಬೆಟ್ಟಿಂಗ್ ವಿಚಾರ ಕೇಳಿ ಬರುತ್ತಿದೆ. ದಾಬಾದಿಂದ ಕುಡಿದು ಬಂದಿದ್ದ ಮೃತ ಪ್ರಕಾಶ ಹಾಗೂ ಆತನ ಸ್ನೇಹಿತರು ದ್ಯಾಬೇರಿ ಕೆರೆಗೆ ಬಂದಿದ್ದರಂತೆ. ಇಲ್ಲಿ ಕೆರೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಈಜುಕೊಂಡು ಹೋಗಲು ಸಾವಿರಾರು ರೂ. ಬೆಟ್ಟಿಂಗ್ ಕಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಕುಡಿದ ಅಮಲಿನಲ್ಲಿದ್ದ ಪ್ರಕಾಶ ಈಜಲು ಹೋಗಿ ಕೈ ಸೋತು ಮುಳುಗಿರಬಹುದು ಎನ್ನುತ್ತಿದ್ದಾರೆ. ಈ ಸಾವಿನ ರಹಸ್ಯ ಪೊಲೀಸರ ತನಿಖೆಯಿಂದಲೇ ಹೊರ ಬರಬೇಕಾಗಿದೆ.