ವಿಜಯಪುರ: ಟಿಪ್ಪುಸುಲ್ತಾನ್ ಹತ್ಯೆ ಮಾಡಿದ ಉರಿಗೌಡ ಹಾಗೂ ನಂಜೇಗೌಡ ವಿಚಾರ ಕುರಿತಾಗಿ ನಿರ್ಮಲಾನಂದ ಶ್ರೀ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಚರ್ಚೆ ಮಾಡಿರೋ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಈ ಕುರಿತು ಈಗಾಗಲೇ ಸ್ವಾಮೀಜಿಗಳು ಮುನಿರತ್ನ ಜತೆಗೆ ಚರ್ಚಿಸಿದ್ದಾರೆ. ನಿರ್ಮಲಾನಂದ ಸ್ವಾಮೀಜಿಗಳು ಮುನಿರತ್ನ ಅವರಿಗೆ ಸೂಕ್ಷ್ಯವಾಗಿ ಏನು ಹೇಳಬೇಕು ಅದನ್ನ ಹೇಳಿದ್ದಾರೆ. ಅದಕ್ಕೆ ಮುನಿರತ್ನ ಕೂಡ ಒಪ್ಪಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಮುದ್ದೇಬಿಹಾಳ ತಾಲೂಕು ನಾಲತವಾಡದಲ್ಲಿ ವಿವಿಧ ಯೋಜನೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಆಗಮಿಸಿದ್ದ ಅವರು ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಆ ವಿಚಾರದಲ್ಲಿ ನಿರ್ಮಲಾನಂದ ಶ್ರೀಗಳು ಹೇಳಿದಂತೆ ನಾವೆಲ್ಲ ಒಪ್ಪಿಕೊಂಡಿದ್ದೇವೆ.
ಉರಿಗೌಡ ನಂಜೇಗೌಡ ವಿಚಾರದಲ್ಲಿ ರಾಜಕಾರಣ ಬೇಡ : ಈ ವಿಚಾರದಲ್ಲಿ ಹೆಚ್ಚಿನ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ ಎಂದು ಡಿ ಕೆ ಶಿವಕುಮಾರ್ಗೆ ಹೇಳಲು ಇಚ್ಛೆ ಪಡುತ್ತೇನೆ. ಉರಿಗೌಡ ಹಾಗೂ ನಂಜೇಗೌಡ ವಿಚಾರವನ್ನು ಪಠ್ಯದಲ್ಲಿ ಸೇರಿಸುವ ಕುರಿತು ಮಾತನಾಡಿದ ಸಿಎಂ, ಪಠ್ಯದಲ್ಲಿ ಸೇರಿಸಲು ಅದಕ್ಕೆ ಕೆಲ ಕ್ರಮಗಳಿವೆ. ಅದಕ್ಕಾದ ಕಮಿಟಿ ಇದೆ ಎಂದು ಹೇಳಿದರು.
ಅಥಣಿ ಕ್ಷೇತ್ರದ ಸಮಸ್ಯೆ ಆಗಲ್ಲ: ಬೆಳಗಾವಿ ಅಥಣಿ ಕ್ಷೇತ್ರಕ್ಕೆ ಹಾಲಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ಸಿಗದಿದ್ದರೆ ನಾನು ಗೋಕಾಕದಿಂದ ಸ್ಪರ್ಧೆ ಮಾಡಲ್ಲ ಎಂಬ ರಮೇಶ ಜಾರಕಿಹೊಳಿ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ, ಅದೆಲ್ಲ ಏನಿಲ್ಲವೆಂದು ಸಮಜಾಯಿಷಿ ನೀಡಿದರು. ನಮ್ಮ ಪಕ್ಷದಲ್ಲಿ ಕುಳಿತುಕೊಂಡು ಅದೆಲ್ಲ ಸರಿ ಮಾಡುತ್ತೇವೆ. ಅದೇನು ದೊಡ್ಡ ವಿಚಾರವಲ್ಲ. ರಮೇಶ ಜಾರಕಿಹೊಳಿ ಮಹೇಶ ಕುಮಟಳ್ಳಿ ಹಾಗೂ ಲಕ್ಷ್ಮಣ ಸವದಿಯವರೊಂದಿಗೆ ಮಾತನಾಡಿದ್ದೇನೆ, ಯಾವುದೇ ಸಮಸ್ಯೆ ಆಗಲ್ಲ ಎಂದು ಸ್ಪಷನೆ ನೀಡಿದರು.
ಸಚಿವ ವಿ ಸೋಮಣ್ಣ ಪಕ್ಷ ಬಿಡಲ್ಲ: ಸಚಿವ ವಿ ಸೋಮಣ್ಣ ಪಕ್ಷ ಬಿಡೋ ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಎಂ ಪಕ್ಷ ಬಿಡಲ್ಲ ಎಂದು ಈಗಾಗಲೇ ಸಚಿವ ಸೋಮಣ್ಣ ಹೇಳಿದ್ದಾರೆಂದು, ಚುನಾವಣೆಗೂ ಮುನ್ನ ಪಕ್ಷಾಂತರ ಪ್ರಕ್ರಿಯೆ ಆರಂಭ ಸಹಜವಾಗಿದೆ. ಬಿಜೆಪಿಯ ಮುಖಂಡ ಬಾಬುರಾವ್ ಚಿಂಚಸೂರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಚುನಾವಣೆಯ ಸಂದರ್ಭದಲ್ಲಿ ಇವೆಲ್ಲಾ ಸಾಮಾನ್ಯ. ಅವರವರ ಕ್ಷೇತ್ರ ಅವರವರ ವಿಚಾರದಲ್ಲಿ ಈ ಕಡೆಯಿಂದ ಆ ಕಡೆಗೆ ಆ ಕಡೆ ಇರ್ತದೆ. ಇವತ್ತು ಜನರು ಬಹಳ ಬುದ್ಧಿವಂತರಿದ್ದಾರೆ. ಎಲ್ಲಿಯವರೆಗೆ ಜನ ಚಿಂತನೆಯನ್ನು ಮಾಡುವದಿಲ್ಲವೋ, ಯಾವುದೇ ರೀತಿಯ ಪಕ್ಷಾಂತರ ಯಾವುದೇ ರೀತಿಯ ಪರಿಣಾಮ ಬೀರಲ್ಲ ಜನರು ಸ್ಥಿರವಾಗಿದ್ದರೆ ಸಾಕು ಎಂದರು.
ಕಾಂಗ್ರೆಸ್ ಜನರನ್ನು ಯಾಮಾರಿಸುವ ತೀರ್ಮಾನ: ಕಾಂಗ್ರೆಸ್ ಪಕ್ಷದಿಂದ ನಿರುದ್ಯೋಗಿ ಪದವಿ ಯುವಕರಿಗೆ ಮಾಸಿಕ 3000 ಧನ ಘೋಷಣೆ ವಿಚಾರವಾಗಿ ಮಾತನಾಡಿದ ಸಿಎಂ, ಇಂಥ ಇನ್ನೂ ನಾಲ್ಕು ಘೋಷಣೆ ಮಾಡಲಿ ಯಾವುದೇ ತೊಂದರೆ ಇಲ್ಲ. ಯಾವ ಯಾವ ರಾಜ್ಯದಲ್ಲಿ ಯಾವ ಯಾವ ಘೋಷಣೆ ಮಾಡಿದ್ದಾರೆ ಎಂಬ ಟ್ರ್ಯಾಕ್ ರೆಕಾರ್ಡ್ ಇದೆ.
ಹಿಂದಿನ ರಾಜ್ಯದಲ್ಲಿ ಮಾಡಿಲ್ಲ. ಮುಂದಿನ ರಾಜ್ಯದಲ್ಲಿ ಮಾಡುತ್ತಿವೆ. ಜನರು ನಂಬುತ್ತಾರೋ ಇಲ್ಲವೋ. ಘೋಷಣೆ ಮಾಡಿದ್ದಾರೆ. ಜನರು ಚಿಂತನೆ ಮಾಡಬೇಕು. ಕಾಂಗ್ರೆಸ್ನವರು ಜನರನ್ನು ಯಾಮಾರಿಸುವ ತೀರ್ಮಾನವನ್ನು ಮಾಡಿದ್ದಾರೆ. ಸೋಲುವ ಭೀತಿಯಿಂದ ಈ ಥರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಸ್ಪರ್ಧೆಗೆ ಕಮೆಂಟ್ ಮಾಡಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಲ್ಲೇ ಸ್ಪರ್ಧೆ ಮಾಡುವಂತೆ ಬೆಂಬಲಿಗರ ಒತ್ತಾಯ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಅದರ ಬಗ್ಗೆ ನಾನು ಕಮೆಂಟ್ ಮಾಡಲ್ಲ. ಸಿದ್ದರಾಮಯ್ಯ ಹಿರಿಯ ರಾಜಕಾರಣಿಗಳಿದ್ದಾರೆ. ಅವರು ತೀರ್ಮಾನ ಮಾಡುತ್ತಾರೆ. ಎಲ್ಲಿ ಸ್ಪರ್ಧೆ ಮಾಡಬೇಕೆಂಬ ತೀರ್ಮಾನ ಅವರಿಗೆ ಬಿಟ್ಟಿದ್ದು ಎಂದು ಹೇಳಿದರು.
ಮುಂದಿನ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಯಾವಾಗ ಎನ್ನುವ ಪ್ರಶ್ನೆಗೆ ಮಾತನಾಡಿದ ಸಿಎಂ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಯಾವಾಗ ಮಾಡಬೇಕು ಎಂಬುದು ನಮ್ಮ ಪಕ್ಷಕ್ಕೆ ಗೊತ್ತಿದೆ. ನಮ್ಮದು ರಾಷ್ಟ್ರೀಯ ಪಕ್ಷ, ನಮ್ಮ ಪಾರ್ಲಿಮೆಂಟರಿ ಬೋರ್ಡ್ ಕುಳಿತುಕೊಳ್ಳಲಿದೆ. ರಾಜ್ಯದ ಕೋರ್ ಕಮಿಟಿ ಕುಳಿತುಕೊಂಡು ತೀರ್ಮಾನ ಮಾಡುತ್ತದೆ. ಅದನ್ನು ಸೂಕ್ತ ಸಮಯದಲ್ಲಿ ಮಾಡಲಾಗುತ್ತದೆ ಎಂದರು.
ಇದನ್ನೂಓದಿ:ಸಿದ್ದರಾಮಯ್ಯ ಕ್ಷೇತ್ರ ಹುಡುಕ್ತಿರೋದು ನೋಡಿದ್ರೆ ಅನುಕಂಪ ಹುಟ್ಟುತ್ತೆ: ಹೆಚ್ಡಿಕೆ