ವಿಜಯಪುರ: ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಅಪರಾಧ ಘಟನೆಗಳು ನಡೆದಿವೆ. ಒಂದು ಪ್ರಕರಣದಲ್ಲಿ ಟಿಪ್ಪರ್ ಚಾಲಕನ ಅತಿವೇಗದ ಚಾಲನೆಗೆ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇದೇ ವೇಳೆ, ಮಕ್ಕಳಿಬ್ಬರು ಗಾಯಗೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಬೇಸಗೆ ರಜೆಗೆಂದು ಮನೆಗೆ ಬಂದಿದ್ದ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸುದ್ದಿಯ ವಿವರ ಇಲ್ಲಿದೆ.
ಅಪಘಾತದಲ್ಲಿ ಅತ್ತೆ-ಅಳಿಯ ಸಾವು: ಬೈಕ್ಗೆ ಟಿಪ್ಪರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹೊರವಲಯದಲ್ಲಿ ಗುರುವಾರ ನಡೆದಿದೆ. ಮೃತರನ್ನು ಶರಣಮ್ಮ ಕಂಬಳಿ, ನಾಗೇಶ ಶಿವಪೂರೆ ಎಂದು ಗುರುತಿಸಲಾಗಿದೆ.
ಶರಣಮ್ಮ ಮತ್ತು ನಾಗೇಶ ಸಂಬಂಧದಲ್ಲಿ ಅತ್ತೆ ಮತ್ತುಅಳಿಯ. ರಾತ್ರಿ 8 ರಿಂದ 9 ಗಂಟೆ ಸುಮಾರಿಗೆ ನಾಗೇಶ ತಮ್ಮ ಇಬ್ಬರು ಮಕ್ಕಳೊಂದಿಗೆ ಶರಣಮ್ಮನ ಜೊತೆ ಕೆಲಸದ ನಿಮಿತ್ತ ಹೊರ ಹೋಗಿದ್ದಾರೆ. ಈ ವೇಳೆ ಚಾಲಕನೊಬ್ಬ ವೇಗದಿಂದ ಟಿಪ್ಪರ್ ಚಲಾಯಿಸಿ ಬೈಕ್ಗೆ ಗುದ್ದಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕ್ ನೆಲಕ್ಕುರುಳಿ ಬಿದ್ದಿದೆ. ಶರಣಮ್ಮ ಮತ್ತು ನಾಗೇಶ ರಸ್ತೆಗೆ ಬಿದ್ದಿದ್ದಾರೆ. ಟಿಪ್ಪರ್ ಇಬ್ಬರ ಮೇಲೂ ಹರಿದಿದೆ. ಮಕ್ಕಳಿಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಅಪಘಾತದ ಬಳಿಕ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಬೇಜವಾಬ್ದಾರಿಯ ವಾಹನ ಚಾಲನೆಯಿಂದ ಅವಘಡ ಸಂಭವಿಸಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಮುದ್ದೇಬಿಹಾಳ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದ ಭೀಕರತೆ ಎಷ್ಟಿತ್ತು ಅಂದ್ರೆ ಮೃತದೇಹಗಳು ಪತ್ತೆಯಾಗದ ರೀತಿಯಲ್ಲಿ ಛಿದ್ರಗೊಂಡಿದ್ದವು. ಪೊಲೀಸರು ಸ್ಥಳೀಯರ ಸಹಾಯದಿಂದ ಮೃತದೇಹಗಳನ್ನು ಚೀಲವೊಂದರಲ್ಲಿ ತುಂಬಿ, ಅಂಬ್ಯುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಇಬ್ಬರೂ ಮುದ್ನಾಳ ಗ್ರಾಮದ ನಿವಾಸಿಗಳು ಆಗಿದ್ದರು. ಅಪಘಾತದಲ್ಲಿ ಆರು ಮತ್ತು ಎಂಟು ವರ್ಷದ ಎರಡು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ. ಮುದ್ದೇಬಿಹಾಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ಮೂಲಕ ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.
ಮನೆಗೆ ಬಂದ ಮಗಳು ಆತ್ಮಹತ್ಯೆಗೆ ಶರಣು: 10 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಗುರುವಾರ ನಡೆಯಿತು. ರೂಪಾ ಭೈರಪ್ಪ ತೆಲಗಾಂವ (16) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ವಿಭೂತಿಹಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ರೂಪಾ 10 ತರಗತಿ ಪರೀಕ್ಷೆ ಮುಗಿಸಿಕೊಂಡು ಬೇಸಿಗೆ ರಜೆಗೆಂದು ತನ್ನ ಮನಗೆ ಬಂದಿದ್ದರು. ಕೆಲವೇ ದಿನಗಳಲ್ಲಿ ಶಾಲಾ-ಕಾಲೇಜ್ ಆರಂಭವಾಗುತ್ತಿದ್ದು, ಇದಕ್ಕೂ ಮುನ್ನವೇ ರೂಪಾ ಪಟ್ಟಣದ ಸಂಗಮೇಶ್ವರ ಮಂಗಲ ಕಾರ್ಯಾಲಯದ ಹಿಂಬದಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು. ಬಾಲಕಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಾಲಕಿ ತಂದೆ ಭೈರಪ್ಪ ಅವರು ನೀಡಿದ ದೂರಿನಂತೆ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಕುರಿತು ಪೊಲೀಸರು ಮುಂದಿನ ಕ್ರಮ ಅನುಸರಿಸಿದ್ದಾರೆ.
ಇದನ್ನೂ ಓದಿ: ಕಣ್ಣಾಮುಚ್ಚಾಲೆ ಆಡುತ್ತಿದ್ದ ಬಾಲಕಿ ಕಾರಿನೊಳಗೆ ಉಸಿರುಗಟ್ಟಿ ಸಾವು.. ಮಕ್ಕಳ ಬಗ್ಗೆ ಹುಷಾರು!