ವಿಜಯಪುರ: ಲಾರಿ ಹಾಗೂ ಸರ್ಕಾರಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಲಾರಿ ಚಾಲಕ ಹಾಗೂ ಬಸ್ನಲ್ಲಿದ್ದ ಓರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಈ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದ ಬಳಿ ನಡೆದಿದೆ. ಗಾಯಗೊಂಡ ಇತರೆ 24 ಜನ ಪ್ರಯಾಣಿಕರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಟಿಎನ್ 52 ಹೆಚ್ 6,877 ನಂಬರ್ನ ಲಾರಿ ಹಾಗೂ ಕೆಎ 28 ಎಫ್ 2015 ನಂಬರ್ನ ಬಸ್ ಮಧ್ಯೆ ಅಪಘಾತ ನಡೆದಿದೆ. ಲಾರಿ ಚಾಲಕ ತಮಿಳುನಾಡು ಮೂಲದ ಬಾಬು ವೆಂಕಟೇಶ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಶ್ರದ್ಧಾ ಶಿವಾನಂದ ಬಡಿಗೇರ (18 ) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಘಟನೆ ನಡೆದ ವೇಳೆ ಗಾಯಾಳುವನ್ನು ಸಾಗಾಟ ಮಾಡಲು ಆ್ಯಂಬುಲೆನ್ಸ್ ತಡವಾಗಿ ಆಗಮಿಸಿದೆ ಎಂದು ಜನರು ದೂರಿದರು. ಲಾರಿ ಜತ್ತ್ನಿಂದ ವಿಜಯಪುರಕ್ಕೆ ಹೊರಟಿತ್ತು. ಇತ್ತ ಸರ್ಕಾರಿ ಬಸ್ ವಿಜಯಪುರ ನಗರದಿಂದ ತಿಕೋಟಾ ತಾಲೂಕಿನ ಕನಮಡಿಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಪರಿಷತ್ ಚುನಾವಣೆ ಫಲಿತಾಂಶ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಗಂಟೆ: ಪ್ರಿಯಾಂಕ್ ಖರ್ಗೆ