ಮುದ್ದೇಬಿಹಾಳ: ಸಿಮೆಂಟ್ ತುಂಬಿದ್ದ ಗೂಡ್ಸ್ ವಾಹನವೊಂದು ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ನೇಬಗೇರಿ ಸಮೀಪದ ಹಾದಿ ಬಸವಣ್ಣ ಕಟ್ಟೆಯ ಬಳಿ ನಡೆದಿದೆ.
ದುರಂತದಲ್ಲಿ ಮುದ್ದೇಬಿಹಾಳ ತಾಲೂಕಿನ ಗೆದ್ದಲಮರಿ ತಾಂಡಾದ ವೆಂಕಟೇಶ ಲಕ್ಷ್ಮಣ ಪವಾರ(40) ಹಾಗೂ ಢವಳಗಿ ಗ್ರಾಮದ ನಾಗಪ್ಪ ಸಂಗಪ್ಪ ದಂಡೆನವರ(45) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗೆದ್ದಲಮರಿಯ ಗೋವಿಂದ ರಾಮು ಲಮಾಣಿ ಹಾಗೂ ನಾರಾಯಣಪೂರದ ಕುಮಾರ ರಾಮಪ್ಪ ಚವ್ಹಾಣ ಗಾಯಗೊಂಡು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮುದ್ದೇಬಿಹಾಳದಿಂದ ನೇಬಗೇರಿ ಕಡೆಗೆ ಮುದ್ದೇಬಿಹಾಳ ನಗರದ ಸಜ್ಜನ ಟ್ರೇಡರ್ಸ್ರ ಅಂಗಡಿಯಿಂದ ಸಿಮೆಂಟ್ ತುಂಬಿಕೊಂಡು ನೇಬಗೇರಿ ಕಡೆಗೆ ಗೂಡ್ಸ್ ವಾಹನ ತೆರಳುತ್ತಿತ್ತು. ಈ ವೇಳೆ ರಸ್ತೆಯಲ್ಲಿ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ವಾಹನ ಪಲ್ಟಿ ಆಗಿದೆ. ಪರಿಣಾಮ ಸಿಮೆಂಟ್ ಚೀಲಗಳು ಕಾರ್ಮಿಕರಿಬ್ಬರ ಮೇಲೆ ಉರುಳಿ ಬಿದ್ದಿದ್ದು, ಮೃತರ ಸಾವಿಗೆ ಕಾರಣವಾಗಿದೆ.
ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ತೆರಳಿದ ಸಿಪಿಐ ಆನಂದ ವಾಘಮೋಡೆ, ಪಿಎಸೈ ಎಂ.ಬಿ ಬಿರಾದಾರ ರಸ್ತೆಯ ಮಧ್ಯದಲ್ಲಿಯೇ ಬಿದ್ದಿದ್ದ ವಾಹನ ತೆರವುಗೊಳಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.