ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
8 ವರ್ಷಗಳಿಂದ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದ ಜಿಲ್ಲೆಯ ಬಸವನ ಬಾಗೇವಾಡಿ ನಿವಾಸಿ 61 ವರ್ಷ ವೃದ್ಧೆ (ಪಿ-94732) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇವರು ಜುಲೈ 23ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, 25ರಂದು ಮೃತಪಟ್ಟಿದ್ದಾರೆ. ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದ ಅಗಸನಾಳದ ನಿವಾಸಿ 64 ವರ್ಷ ವೃದ್ಧ (ಪಿ-94796) ಕೂಡ ಚಿಕಿತ್ಸೆ ಫಲಕಾರಿಯಾಗದೆ ಜುಲೈ 24 ರಂದು ಮೃತಪಟ್ಟಿದ್ದಾರೆ.
ಈ ಇಬ್ಬರ ಗಂಟಲು ದ್ರವ ಮಾದರಿ ಪರೀಕ್ಷಿಸಲಾಗಿದ್ದು, ಇಬ್ಬರಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಮೃತರ ಅಂತ್ಯಸಂಸ್ಕಾರ ಶಿಷ್ಟಾಚಾರದಂತೆ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.