ವಿಜಯಪುರ: ಆಲಮಟ್ಟಿ ಜಲಾಶಯದ ಆವರಣದಲ್ಲಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಬುರ್ಖಾಧಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಡ್ಯಾಂ ಪ್ರವೇಶ ದ್ವಾರದಲ್ಲಿ ಇಂದು ಬೆಳಗ್ಗೆ ನಸುಕಿನ ಜಾವದಲ್ಲೇ ಬುರ್ಖಾ ಧರಿಸಿ ಡ್ಯಾಂ ಆವರಣಕ್ಕೆ ಹೋಗುತ್ತಿದ್ದವನು ಡ್ಯಾಂ ಒಳಗೆ ನುಗ್ಗಲು ಪ್ರಯತ್ನಿಸಿದ್ದ. ಈ ವೇಳೆ ಡ್ಯಾಂ ಒಳಗೆ ಪ್ರವೇಶ ನೀಡಲು ಆಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದರು.
ಈ ವೇಳೆ ಬುರ್ಖಾ ಧರಿಸಿರುವುದು ಮಹಿಳೆಯಲ್ಲ, ಪುರುಷ ಎಂಬುದು ಪೊಲೀಸರಿಗೆ ಸಂಶಯ ವ್ಯಕ್ತವಾಗಿತ್ತು. ಅಲ್ಲದೇ, ಕೆಲ ಸಮಯದ ಬಳಿಕ ಬುರ್ಖಾಧಾರಿ ಮುಳ್ಳು ಕಂಟಿಗಳಾಚೆ ಹೋಗಿ ಬುರ್ಖಾ ತೆಗೆದು ಆಚೆ ಬಂದಿದ್ದ. ಇದಾದ ನಂತರ ಬುರ್ಖಾಧಾರಿ ಮಹಿಳೆಯಲ್ಲ, ಪುರುಷ ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಬುರ್ಖಾ ಧರಿಸಿ ಬಂದಿದ್ದು ಯುವಕ ಎಂಬುದನ್ನು ಕಂಡುಹಿಡಿದ ಕೂಡಲೇ ಆತನನ್ನು ವಶಕ್ಕೆ ಪಡೆದು ಆಲಮಟ್ಟಿ ಪೊಲೀಸರು ವಿಚಾರಣೆ ನಡೆಸಿದಾಗ ತಾನು ಹಾಸನ ಜಿಲ್ಲೆಯ ಸಕಲೇಶಪುರ ನಿವಾಸಿ ಎಂದು ಹೇಳಿಕೊಂಡಿದ್ದಾನೆ.
ತನ್ನ ಹೆಸರು ಕಿಶೋರ್ ಮಲ್ಲಿಕಾರ್ಜುನ ಸ್ವಾಮಿ ಎಂದು ಹೇಳಿಕೊಂಡಿದ್ದಾನೆ. ನನ್ನಲ್ಲಿ ಹೆಣ್ತನ ಬೆಳೆಯುತ್ತಿದೆ. ಹೀಗಾಗಿ, ತೃತೀಯ ಲಿಂಗಿಯಾಗಿ ಪರಿವರ್ತನೆ ಹೊಂದುತ್ತಿದ್ದೇನೆ. ನನಗೆ ಮದುವೆ ಬೇಡ ಎಂದರೂ ಮನೆಯಲ್ಲಿ ಒತ್ತಡ ಹೇರುತ್ತಿದ್ದಾರೆ. ಆದ್ದರಿಂದ, ಮನೆ ಬಿಟ್ಟು ಬಂದಿದ್ದಾಗಿ ಕೆಲ ವಿಚಾರ ಹೇಳಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸದ್ಯ ಸಿಬ್ಬಂದಿ ವಿಚಾರಣೆಯನ್ನು ಮುಂದುವರೆಸಿದ್ದಾರೆ. ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಪಿಎಸ್ಐ ಪರೀಕ್ಷೆ ಅಕ್ರಮ: ಕಲಬುರಗಿ ನಗರ ಪೊಲೀಸ್ ಆಯುಕ್ತರನ್ನು ಪ್ರಶ್ನಿಸಿದ ಸಿಐಡಿ