ವಿಜಯಪುರ: ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ರೆಮ್ಡಿಸಿವಿರ್ ಔಷಧ ಮಾರಾಟ ಮಾಡಿದ ಬಗ್ಗೆ ಈಗಾಗಲೇ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಸ್ಪಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೆಮ್ಡಿಸಿವಿರ್ಗೆ ಬೇಡಿಕೆ ಹೆಚ್ಚಾಗಿರುವ ಕಾರಣ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಅಗತ್ಯವಿರುವವರಿಗೆ ಔಷಧಿ ಸಿಗುತ್ತಿಲ್ಲ ಎಂದರು. ಜಿಲ್ಲೆಯಲ್ಲಿ ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಈ ಸಂಬಂಧ 3 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಖಾಸಗಿ ಆಸ್ಪತ್ರೆಯ ಸ್ಟಾಫ್ ನರ್ಸ್ಗಳು ಕೂಡ ಶಾಮಿಲಾಗಿದ್ದಾರೆ. ಇದು ಆತಂಕಕಾರಿ ವಿಷಯವಾಗಿದೆ ಎಂದರು.
ಓದಿ : ಕಾವೇರಿ ನದಿಗೆ ಕೋವಿಡ್ನಿಂದ ಮೃತಪಟ್ಟವರ ಅಸ್ಥಿ: ರಸ್ತೆ ತಡೆದು ಸ್ಥಳೀಯರ ಆಕ್ರೋಶ
ರೋಗಿಯ ಹೆಸರಿನಲ್ಲಿ ಇಂಜೆಕ್ಷನ್ ಪಡೆದು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಔಷಧಿ ಮಾರಾಟ ಮಾಡಿದ ಮೂರು ಪ್ರಕರಣ ದಾಖಲಾಗಿದ್ದು, ಹತ್ತು ಜನರನ್ನು ಬಂಧಿಸಲಾಗಿದೆ. ಗೋಲ್ ಗುಂಬಜ್ ಠಾಣಾ ವ್ಯಾಪ್ತಿಯಲ್ಲಿ ಎರಡು ಹಾಗೂ ಗಾಂಧಿ ಚೌಕ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.