ವಿಜಯಪುರ: ಬೈಕ್ ಕಳ್ಳತನ ಮಾಡಲು ಯತ್ನಿಸಿ ಗ್ರಾಮಸ್ಥರಿಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳರಿಗೆ ಗ್ರಾಮಸ್ಥರು ಧರ್ಮದೇಟು ನೀಡಿದ ಘಟನೆ ವಿಜಯಪುರ ತಾಲೂಕಿನ ತಿಕೋಟಾ ಹತ್ತಿರದ ಕಳ್ಳಕವಟಗಿ ಗ್ರಾಮದಲ್ಲಿ ನಡೆದಿದೆ.
ಕಳ್ಳಕವಟಗಿ ಗ್ರಾಮದಲ್ಲಿ ಪ್ರಕಾಶ ಸಾವಂತ್ ಹಾಗೂ ಮಲ್ಲಿಕಾರ್ಜುನ ಸಲಗರ ಎಂಬುವರೇ ಸಿಕ್ಕಿಬಿದ್ದ ಬೈಕ್ ಕಳ್ಳರು. ಈ ಇಬ್ಬರು ಸೇರಿ ಬಸವರಾಜ ನಿಡೋಣಿ ಎಂಬುವರಿಗೆ ಸೇರಿದ ಬೈಕ್ ಕಳ್ಳತನ ಮಾಡಲು ಬಂದಿದ್ದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಸಿಕ್ಕಿಬಿದ್ದು ಧರ್ಮದ ಏಟು ತಿಂದಿದ್ದಾರೆ. ಅಲ್ಲದೇ, ಗ್ರಾಮದಲ್ಲಿ ಈ ಹಿಂದೆಯೂ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ರೈತರ ಪಂಪ್‌ಸೆಟ್, ಬೋರ್‌ವೆಲ್ ಕೇಬಲ್, ಅಂಗಡಿ, ಹೋಟೆಲ್, ಮನೆ, ಕುರಿ ಮತ್ತು ಕುರಿ ಮರಿ, ಸರ್ಕಾರಿ ಶಾಲೆಗಳಲ್ಲಿನ ಬಿಸಿಯೂಟದ ದಾಸ್ತಾನು, ಬೈಕ್, ಸೈಕಲ್, ಟ್ರ್ಯಾಕ್ಟರ್ನಲ್ಲಿನ ಟೇಪ್ ರೆಕಾರ್ಡ್, ವಾಹನಗಳ ಕಳ್ಳತನ ಮಾಡಿದ ಆರೋಪ ಹೊರಿಸಿ ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ. ತದನಂತರ ಪೊಲೀಸರಿಗೆ ಕಳ್ಳರನ್ನು ಒಪ್ಪಿಸಿದ್ದಾರೆ. ಈ ಕುರಿತು ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.