ಮುದ್ದೇಬಿಹಾಳ: ತಾಲೂಕಿನ ಬಿಜ್ಜೂರ ಗ್ರಾಪಂನಲ್ಲಿ ಅಕ್ರಮ ನಡೆಸಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿ ತಾಲೂಕಿನ ಬಿಜ್ಜೂರ ಗ್ರಾಮಸ್ಥರು, ದಲಿತಪರ ಸಂಘಟನೆಗಳ ಹೋರಾಟಗಾರರು ಬುಧವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ಹೋರಾಟಗಾರರಾದ ಮಲ್ಲು ತಳವಾರ, ಎಂ.ಬಿ.ದಖನಿ, ಜಗದೀಶ ಜಗ್ಲರ್ ಮಾತನಾಡಿ, ಬಿಜ್ಜೂರ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಎಸಗಿ ವಸತಿ ಯೋಜನೆಯಡಿ ಲಕ್ಷಾಂತರ ರೂಪಾಯಿಗಳನ್ನು ಗ್ರಾಪಂ ಅಧಿಕಾರಿಗಳು ಲಪಟಾಯಿಸಿದ್ದಾರೆ. ಅಲ್ಲದೇ ಬಿಜ್ಜೂರ ಹಾಗೂ ಸುಲ್ತಾನಪುರದ ಸರ್ಕಾರಿ ಜಾಗವಾದ ಸರ್ವೇ ನಂಬರ್ 3, 60, 61, 79, 81, 82, 187, 306, 309, 311,316, 333, 334, 516, 588 ತಿದ್ದುಪಡಿ ಮಾಡಲಾಗಿದ್ದು, ಈ ಬಗ್ಗೆ ದೂರು ಸಲ್ಲಿಸಿದ್ದೇವೆ. ಇಲ್ಲಿಯವರೆಗೂ ಅಧಿಕಾರಿಗಳು ಕ್ರಮ ಕೈಗೊಳ್ಳುವ ಬಗ್ಗೆ ಚಕಾರವೆತ್ತುತ್ತಿಲ್ಲ. ಇದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ದೂರಿದರು.
ಓದಿ: ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆದ ಮಹಿಳಾ ಕಾಯಕೋತ್ಸವ
ಗ್ರಾಪಂ ದಾಖಲೆಗಳು ಒಂದು ವೇಳೆ ಸಿಗದೇ ಇದ್ದರೆ ಇಂತವರ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಅಧಿನಿಮಯ 2010ರ ಸಂಖ್ಯೆ ಸರ್ಕಾರದ ಆದೇಶ ಕಲಂ ಪ್ರಕಾರ ಸಂಬಂಧಿಸಿದ ಅಧಿಕಾರಿಗಳು ದೂರು ದಾಖಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಹೋರಾಟದ ಸ್ವರೂಪ ಬದಲು:
ಅಧಿಕಾರಿಗಳು ಕಾಲಹರಣ ಮಾಡದೇ ತ್ವರಿತವಾಗಿ ಕ್ರಮ ಕೈಗೊಳ್ಳದೇ ಇದ್ದಲ್ಲಿ ಹೋರಾಟದ ಸ್ವರೂಪ ಬದಲಾಯಿಸಲಾಗುವುದು ಎಂದು ಹೋರಾಟಗಾರರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಮುಖಂಡರಾದ ಮಲ್ಲು ತಳವಾರ, ತಲೆ ಮೇಲೆ ಕಲ್ಲು ಹೊತ್ತು ನಿಲ್ಲುವುದು, ಮುದ್ದೇಬಿಹಾಳದವರೆಗೆ ಅರೆಬೆತ್ತಲೆಯಾಗಿ ಪಾದಯಾತ್ರೆ ನಡೆಸುವುದಾಗಿ ತಿಳಿಸಿದ್ದಾರೆ.
ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ:
ಗ್ರಾಪಂನಲ್ಲಿ 2015ರಿಂದ ಇಲ್ಲಿಯವರೆಗೆ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ 15ನೇ ಹಣಕಾಸಿನ ಕ್ರಿಯಾ ಯೋಜನೆ, ಕ್ಯಾಶ್ ಬುಕ್ ಖರ್ಚಿನ ಮಾಹಿತಿ, ಎನ್.ಆರ್.ಇ.ಜಿ ಕ್ರಿಯಾ ಯೋಜನೆ, ದಾಖಲಾತಿಗಳ ಪರಿಶೀಲನೆ, 2016ರಿಂದ ವಸತಿ ಯೋಜನೆಗಳ ಹಂಚಿಕೆ, ಪಟ್ಟಿ ಗ್ರಾಮ ಸಭೆಯ ಠರಾವು ಪುಸ್ತಕ, ಡಾ. ಅಂಬೇಡ್ಕರ್ ವಸತಿ ಯೋಜನೆಯಡಿ ಹಂಚಿಕೆಯಾದ ಮನೆಗಳು, ಖಾಲಿ ಜಾಗ, ಶೌಚಾಲಯ, ಪುನರ್ವಸತಿ ಹಾಗೂ ಪುನರ್ ನಿರ್ಮಾಣದ ವೇಳೆ ಹಸ್ತಾಂತರಿಸಿದ ದಾಖಲೆಗಳು, ಬಿಜ್ಜೂರ, ಸುಲ್ತಾನಪೂರ್, ಖಾನಿಕೇರಿ, ಅಯ್ಯನಗುಡಿ, ಲೊಟಗೇರಿ, ಬಿಜ್ಜೂರ, ಇಂಗಳಗಿ-ಟಕ್ಕಳಕಿ ಗ್ರಾಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುವುದು ಎಂದು ತನಿಖಾಧಿಕಾರಿಯಾಗಿ ನೇಮಕವಾಗಿರುವ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ ತಿಳಿಸಿದರು.