ವಿಜಯಪುರ: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಕುರಿತು, ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಸರ್ವೆ ಕಾರ್ಯಕ್ಕಾಗಿ ಮನೆ ಮನೆಗೆ ಭೇಟಿ ನೀಡಲಿದ್ದು, ಸಾರ್ವಜನಿಕರು ಮಾಹಿತಿ ನೀಡಿ ಸಹಕರಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಮನವಿ ಮಾಡಿದ್ದಾರೆ.
ಜಿಲ್ಲೆಯಾದ್ಯಂತ ಜನವರಿ 22ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದು ಬೂತ್ ಮಟ್ಟದಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುತ್ತಿದ್ದು, ನಂತರ 2 , 3ನೇ ಮತ್ತು 4ನೇ ದಿನಗಳಂದು ಆರೋಗ್ಯ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು, ಮನೆ ಮನೆಗೆ ಭೇಟಿ ನೀಡಿ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಿದ್ದಾರೆ ಎಂದರು.
ರಾಷ್ಟ್ರಾದ್ಯಂತ ಒಂದೇ ಸುತ್ತಿನ ಪೋಲಿಯೋ ಲಸಿಕಾ ಕಾರ್ಯಕ್ರಮ ಇದಾಗಿರುವುದರಿಂದ, ಹಿಂದೆ ಎಷ್ಟೇ ಬಾರಿ ಪೋಲಿಯೋ ಲಸಿಕೆ ಹಾಕಿದ್ದರೂ ಕೂಡಾ ಈ ಬಾರಿ ತಮ್ಮ 5 ವರ್ಷದೊಳಗಿನ ಮಗುವಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸುವಂತೆ ಸಾರ್ವಜನಿಕರು ಹಾಗೂ ಮಕ್ಕಳ ಪಾಲಕರಲ್ಲಿ ಮನವಿ ಮಾಡಿದ್ದಾರೆ.
ಡೆಂಗ್ಯೂ, ಲಾರ್ವಾ, ಚಿಕೂನ್ ಗುನ್ಯಾ ಹಾಗೂ ಮಲೇರಿಯಾಗಳಂತಹ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ, ಆರೋಗ್ಯ ಸಿಬ್ಬಂದಿಗಳು ಮನೆ ಮನೆ ಸಮೀಕ್ಷೆ ಕಾರ್ಯ ಕೈಗೊಳ್ಳುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ತಪ್ಪು ಕಲ್ಪನೆಗೆ, ಆತಂಕಕ್ಕೆ ಒಳಗಾಗದೇ ಸಂಬಂಧಿಸಿದ ಸಿಬ್ಬಂದಿಗೆ ಅವಶ್ಯಕ ಮಾಹಿತಿಯನ್ನು ನೀಡುವಂತೆ ಮನವಿ ಮಾಡಿದ್ದಾರೆ.
ಇಂದು ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ
ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ಅಂಗವಾಗಿ ಇಂದು ನಗರದ ನಮಭಾಗ, ಸಿಕ್ಯಾಬ್, ಲುಕ್ಮಾನ್ ಯುನಾನಿ ಕಾಲೇಜಿನಲ್ಲಿ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಚಾಲನೆ ನೀಡಲಿದ್ದಾರೆ.