ವಿಜಯಪುರ: ಮನೆಯವರ ವಿರುದ್ಧ ಕಿರುಕುಳದ ಆರೋಪ ಮಾಡಿದ ವ್ಯಕ್ತಿವೋರ್ವ ಡೆತ್ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಇಬ್ರಾಹಿಂಪುರ ರೈಲು ನಿಲ್ದಾಣ ಬಳಿ ನಡೆದಿದೆ.
ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ನಲ್ಲಿ ವಿಚಿತ್ರವಾಗಿ ತನ್ನ ಕೊನೆ ಆಸೆ ತಿಳಿಸಿದ್ದಾನೆ. ಆತಹತ್ಯೆಗೂ ಮುನ್ನ ಬರೆದಿದ್ದ ಡೆತ್ ನೋಟ್ ಶವದ ಬಳಿ ಪತ್ತೆಯಾಗಿದ್ದು, 'ನಾನು ವಿಶ್ವನಾಥ ಗಂಜ್ಯಾಳ, ನನ್ನ ಸಾವಿಗೆ ನಾನೇ ಕಾರಣ. ನಾನು ಸತ್ತ ಮೇಲೆ ತಾಯಿ, ಅಕ್ಕ, ತಮ್ಮ, ಅಳಿಯ ಇವರಿಗೆ ಬಾದಾಮಿ ಹಾಲು ಕುಡಿಸಿ ಹಾಗೂ ನಾನು ಸತ್ತ ಸುದ್ದಿ ತಿಳಿದು ಮಾತನಾಡಿಸಲು ಮನೆಗೆ ಬರುವವರಿಗೂ ಬಾದಾಮಿ ಹಾಲು ಕುಡಿಸಿ. ಇದೇ ನನ್ನ ಕೊನೆಯ ಆಸೆ' ಎಂದು ಪತ್ರ ಬರೆದು ರೈಲಿಗೆ ತಲೆಕೊಟ್ಟಿದ್ದಾನೆ.
ಇನ್ನು ಮೃತನ ವಿಳಾಸ ಪತ್ತೆಗೆ ರೈಲ್ವೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ವಿಜಯಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯವರ ಕಿರುಕುಳದಿಂದ ಹೀಗೆ ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.