ಮುದ್ದೇಬಿಹಾಳ : ಮುಂಬೈನ ನೌಕಾನೆಲೆಯಲ್ಲಿ ಹೈಜಿನಿಸ್ಟ್ ವಿಭಾಗದ ಸೇಲರ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಶುಕ್ರವಾರ ನಿಧನರಾದ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಬಸವರಾಜ ಗುರು ಹೂಗಾರ ಪಾರ್ಥಿವ ಶರೀರ ಇಂದು ಬೆಳಗ್ಗೆ ಮುದ್ದೇಬಿಹಾಳ ಪಟ್ಟಣಕ್ಕೆ ಆಗಮಿಸಿತು.
ಪಟ್ಟಣದ ಬಸವೇಶ್ವರ ವೃತ್ತದಿಂದ ಪಾರ್ಥಿವ ಶರೀರವನ್ನು ಹೊತ್ತಿದ್ದ ಆ್ಯಂಬುಲೆನ್ಸ್ ವಾಹನದ ಮೆರವಣಿಗೆಯ ಮೂಲಕ ಹಳೇ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ಸೈನಿಕ ಮೈದಾನಕ್ಕೆ ತರಲಾಯಿತು. ಈ ವೇಳೆ ತಾಲೂಕಿನ, ಜಿಲ್ಲೆಯ ಗಣ್ಯರು ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಿದರು. ಬಳಿಕ ಒಂದು ನಿಮಿಷ ಮೌನಾಚರಣೆ ಮಾಡಿದ ನಂತರ ಮೃತರ ಸ್ವಗ್ರಾಮ ಕುಂಟೋಜಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು.
ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಗ್ರಾಮಸ್ಥರು ಅಗಲಿದ ನೇವಿ ನೌಕರನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಮೆರವಣಿಗೆ ಮೂಲಕ ಅವರ ತೋಟದಲ್ಲಿ ಹೂಗಾರ ಸಮಾಜದ ವಿಧಿ-ವಿಧಾನದ ಪ್ರಕಾರ ಅಂತ್ಯಕ್ರಿಯೆ ನಡೆಸಲಾಯಿತು.
ಬಿಕ್ಕಿ ಬಿಕ್ಕಿ ಅತ್ತ ತಾಯಿ, ಸಹೋದರಿ : ಬಸರಾಜ ಗುರು ಹೂಗಾರ ಅವರ ಪಾರ್ಥಿವ ಶರೀರ ಗ್ರಾಮಕ್ಕೆ ಬರುತ್ತಲೇ ಅವರ ತಾಯಿ ಪಾರ್ವತಮ್ಮ, ಸಹೋದರಿ ಬಸಮ್ಮ ಬಿಕ್ಕಿ ಬಿಕ್ಕಿ ಅತ್ತರು. ಇವರು ಗೋಳಾಡುವ ದೃಶ್ಯ ನೆರೆದವರ ಕಣ್ಣಂಚಲ್ಲೂ ನೀರು ತರಿಸಿತು.
ಅಂತ್ಯಕ್ರಿಯೆಗೆ 30 ಸಾವಿರ ರೂ.: ನೌಕಾನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬಸವರಾಜು ಗುರು ಅಂತ್ಯಕ್ರಿಯೆಯ ವೆಚ್ಚವಾಗಿ 30 ಸಾವಿರ ರೂ.ಗಳನ್ನು ಮುಂಬೈನ ನೌಕಾನೆಲೆಯ ಹೈಜೆನಿಸ್ಟ್ ವಿಭಾಗದಿಂದ ಆಗಮಿಸಿದ್ದ ಸಿಬ್ಬಂದಿಯು ಮೃತ ಬಸವರಾಜ ಗುರು ತಾಯಿ ಪಾರ್ವತಮ್ಮ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ನೌಕಾನೆಲೆಯ ಇದೇ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಕಾಶ್ ಹೂಗಾರ ಮಾತನಾಡಿ, ಮುಂಬೈಗೆ ಕುಟುಂಬದವರ ಪರವಾಗಿ ತಾವು ತೆರಳಿದ್ದರಿಂದಲೇ ಬಸವರಾಜ ಗುರು ಪಾರ್ಥಿವ ಶರೀರವನ್ನು ಅಲ್ಲಿಯ ಅಧಿಕಾರಿಗಳು ಕೊಂಡೊಯ್ಯಲು ಅನುಮತಿ ನೀಡಿದರು ಎಂದು ಹೇಳಿಕೊಂಡರು.
ಇದನ್ನೂ ಓದಿ: ಬಿಜೆಪಿ ಮುಖ್ಯಮಂತ್ರಿಗಳ ಜೊತೆ ಜೆಪಿ ನಡ್ಡಾ ವಿಡಿಯೋ ಸಂವಾದ: ಬಿಎಸ್ವೈ ಭಾಗಿ