ವಿಜಯಪುರ : ಕೊರೊನಾ ವಿದೇಶದಲ್ಲಿ ನೆಲಸಿರುವವರ ಬದುಕನ್ನು ಚಿಂತಾಜನಕವಾಗಿಸಿರುವುದು ಒಂದೆಡೆಯಾದರೆ, ಬಡವರ ಬದುಕನ್ನೂ ಅಲ್ಲೋಲ ಕಲ್ಲೋಲವಾಗಿಸುತ್ತಿದೆ.
ಕೊರೊನಾ ವೈರಾಣು ಪರಿಣಾಮದಿಂದಾಗಿ ಹೊರರಾಜ್ಯಕ್ಕೆ ದುಡಿಯಲು ಹೋದವರ ಸ್ಥಿತಿ ಯಾರಿಗೂ ಬೇಡ. ವಿಜಯಪುರ ಜಿಲ್ಲೆಯ ಪಡಗಾರನೂರ, ಅಥರ್ಗಾ, ಸಾತಿಹಾಳ, ದೇವರ ಹಿಪ್ಪರಗಿ, ನಿಂಬಾಳ ತಾಂಡಾ, ಉಕ್ಕಲಿ ತಾಂಡಾದ ನಿವಾಸಿಗಳು ಹೊತ್ತಿನ ಊಟಕ್ಕೂ ಇಲ್ಲದೆ ಮಕ್ಕಳೊಂದಿಗೆ ಸುಮಾರು 150 ಮಂದಿ ಪರದಾಡುತ್ತಿದ್ದಾರೆ.
ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ವಾಯಿ ಗ್ರಾಮದಲ್ಲಿ ಈ ನಿವಾಸಿಗಳು ಗುಡಿಸಲು ಹಾಕಿಕೊಂಡು ರಸ್ತೆ ನಿರ್ಮಾಣ ಕಾರ್ಮಿಕರಾಗಿ ದುಡಿಯುತ್ತಿದ್ದರು. ಆದರೆ, ಇಡೀ ದೇಶವೇ ಲಾಕ್‌ಡೌನ್ ಆಗಿರುವ ಹಿನ್ನೆಲೆ ಕೆಲಸವಿಲ್ಲದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ವಾಪಸ್ ಊರಿಗೆ ಬರಲು ಅನುಮತಿ ಕೊಡಿ ಎಂದು ಕಾರ್ಮಿಕರು ಕರ್ನಾಟಕ ಮುಖ್ಯಮಂತ್ರಿಗಳನ್ನು ಬೇಡಿಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಸರ್ಕಾರ ಇವರ ಸಂಕಷ್ಟಕ್ಕೆ ನೆರವಾಗಬೇಕಿದೆ.