ವಿಜಯಪುರ: ಪ್ರವಾಹ ಪರಿಸ್ಥಿತಿ ಎದುರಿಸಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರದ ಮೊತ್ತ ಕಡಿಮೆ ಆಗಲು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಅವೈಜ್ಞಾನಿಕ ನೀತಿಯೇ ಕಾರಣವೆಂದು ಕಂದಾಯ ಸಚಿವ ಆರ್. ಅಶೋಕ್ ಆರೋಪಿಸಿದರು.
ಜಿಲ್ಲಾ ಪಂಚಾಯತ್ ಸಂಭಾಗಣದಲ್ಲಿ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಕುರಿತು ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಕೇಂದ್ರ ಸರ್ಕಾರ ಎನ್ ಡಿಆರ್ ಎಫ್ ಅಡಿಯಲ್ಲಿ ಪರಿಹಾರ ಬಿಡುಗಡೆ ಮಾಡಿದೆ ಎಂದರು.
ಆದರೆ ಎನ್ಡಿಆರ್ಎಫ್ ನಿಯಮದಡಿ ಕಡಿಮೆ ಮೊತ್ತ ಬಿಡುಗಡೆಯಾಗಿದೆ. ಈ ಹಿಂದೆ ಯುಪಿಎ ಸರ್ಕಾರದ ಮನಮೋಹನ್ ಸಿಂಗ್ ಅಧಿಕಾರಾವಧಿಯಲ್ಲಿ ಎನ್ಡಿಆರ್ಎಫ್ ನಿಯಮ ರೂಪಿಸಲಾಗಿತ್ತು. ಕೃಷಿ ಬೆಳೆ, ಮನೆ ನಾಶಕ್ಕೆ ನೀಡುವ ಪರಿಹಾರದ ಮೊತ್ತ ನಿಗದಿಪಡಿಸಿತ್ತು. ಇದೇ ಕಾರಣಕ್ಕೆ ಕಳೆದ ವರ್ಷದ ಪ್ರವಾಹ ಪರಿಸ್ಥಿತಿ ಎದುರಿಸಲು ನೀಡಿದ ಮೊತ್ತ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಎನ್ಡಿಆರ್ಎಫ್ ನಿಯಮಗಳನ್ನು ಮರುಪರಿಶೀಲನೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.