ವಿಜಯಪುರ: ರಾಜ್ಯದಲ್ಲಿ ನಡೆದ ಅಕ್ರಮ ನೇಮಕಾತಿ ವಿಚಾರ ವಿಜಯಪುರ ಜಿಲ್ಲೆಗೂ ಅಂಟಿಕೊಂಡಿದೆ. ಅಕ್ರಮವಾಗಿ ಶಿಕ್ಷಕರ ನೇಮಕ ಹಾಗೂ ಲೋಕೋಪಯೋಗಿ ಇಲಾಖೆಯ ಜೆಇ ಎಇ ನೇಮಕದ ವಿಚಾರವಾಗಿ ಜಿಲ್ಲೆಯಲ್ಲಿಯೂ ಈ ವಿಚಾರ ಸದ್ದು ಮಾಡಿದೆ.
ಪಿಡಬ್ಲ್ಯೂಡಿ ಇಲಾಖೆ ಜೆಇ ಎಇ ನೇಮಕಾತಿ ಅಕ್ರಮ ಪರೀಕ್ಷೆ ಆರೋಪದ ವಿಚಾರವಾಗಿ ವಿಜಯಪುರ ಜಿಲ್ಲೆಯ ಓರ್ವ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ಕೀ ಉತ್ತರ ಸಿದ್ಧಪಡಿಸಿದ ಆರೋಪದಡಿ ಶಿಕ್ಷಕ ಗೊಲ್ಲಾಳಪ್ಪ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಗೊಲ್ಲಾಳಪ್ಪ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುತ್ತರಗಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದು, ಕಲಬುರಗಿ ಬಾಲಾಜಿ ಪಾಲಿಟೆಕ್ನಿಕ್ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಆರೋಪದ ಮೇಲೆ ತನಿಖೆ ನಡೆಯುತ್ತಿದೆ. ಸದ್ಯ ಶಿಕ್ಷಕ ಗೊಲ್ಲಾಳಪ್ಪ ತಲೆಮರೆಸಿಕೊಂಡಿದ್ದಾರೆ.
ಅಕ್ರಮವಾಗಿ ನೇಮಕಾತಿಯಾಗಿರುವ ಆರೋಪದ ಮೇಲೆ ಮತ್ತೋರ್ವ ಶಿಕ್ಷಕನ ಬಂಧನದ ಬಳಿಕ ಜಿಲ್ಲೆಯಲ್ಲಿ ಬಂಧಿತ ಶಿಕ್ಷಕರ ಸಂಖ್ಯೆ ಮೂರಕ್ಕೇರಿದೆ. ಬಸವನಬಾಗೇಬಾಡಿ ತಾಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಅಶೋಕ ಚೌಹಾಣ್ ಅವರನ್ನು ಬಂಧಿಸಲಾಗಿದೆ.
ಬಂಧನದ ಸಂಖ್ಯೆ ಮೂರಕ್ಕೇರಿಕೆ: ಚಿತ್ರದುರ್ಗ ಜಿಲ್ಲೆಯ ಜಗಳೂರಿನಲ್ಲಿ ಮೊದಲು ಸೇವೆ ಸಲ್ಲಿಸಿದ್ದ ಶಿಕ್ಷಕ ಬಳಿಕ ವಿಜಯಪುರ ಜಿಲ್ಲೆಗೆ ವರ್ಗವಾಗಿ ಬಂದಿದ್ದರು. ಈಗಾಗಲೇ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಮಹೇಶ ಸೂಸಲಾದಿ, ಕಪನಿಂಬರಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಸಿದ್ರಾಮಪ್ಪ ಬಿರಾದಾರ್ ಬಂಧನವಾಗಿತ್ತು. ಇದೀಗ ಅಶೋಕ ಚೌಹಾಣ್ ಬಂಧನದಿಂದ ಬಂಧಿತರ ಸಂಖ್ಯೆ ಮೂರಕ್ಕೇರಿದೆ.
ಓದಿ: ರಾಜ್ಯಾದ್ಯಂತ 108 ಆಂಬ್ಯುಲೆನ್ಸ್ ಸಹಾಯವಾಣಿಯಲ್ಲಿ ತಾಂತ್ರಿಕ ದೋಷ.. ರೋಗಿಗಳ ಪರದಾಟ!