ವಿಜಯಪುರ: ಕಳ್ಳರೆಂದು ಭಾವಿಸಿ ಕಾರ್ಮಿಕರ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಹೊಸಮನಿ ಹಟ್ಟಿಯಲ್ಲಿ ನಡೆದಿದೆ. ಕೆಲಸಕ್ಕೆ ಬಂದಿದ್ದ ತಮಿಳುನಾಡಿನ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ.
ಕಳ್ಳತನ ಮಾಡಲು ಬಂದಿದ್ದಾರೆಂದು ಗ್ರಾಮಸ್ಥರು ಬೆನ್ನಟ್ಟಿದಾಗ, 10ಕ್ಕೂ ಹೆಚ್ಚು ಜನ ಕಾರ್ಮಿಕರು ಓಡಿ ಹೋಗಿದ್ದಾರೆ. ಅವರಲ್ಲಿ ಗ್ರಾಮಸ್ಥರ ಕೈಗೆ ಇಬ್ಬರು ಕಾರ್ಮಿಕರು ಸಿಕ್ಕಿ ಹಾಕಿಕೊಂಡಿದ್ದಾರೆ. ಇಬ್ಬರು ಕಾರ್ಮಿಕರ ಕೈಕಾಲು ಕಟ್ಟಿ ಸ್ಥಳೀಯರು ಹಲ್ಲೆ ಮಾಡಿದ್ದಾರೆ. ಬಳಿಕ ಇಂಡಿ ಪಟ್ಟಣ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಲ್ಲೆಗೊಳಗಾದವರು ಕಳ್ಳರಲ್ಲ ಎಂದು ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ. ಕೆಲಸ ಮಾಡಲು ತಮಿಳುನಾಡಿನಿಂದ 12 ಜನ ಕಾರ್ಮಿಕರ ತಂಡ ಬಂದಿತ್ತು. ಈ ಘಟನೆಯಿಂದ ಗಾಬರಿಗೊಂಡು ನಿನ್ನೆ ತಡರಾತ್ರಿ ವಾಪಸ್ ತಮಿಳುನಾಡಿಗೆ ಹೋಗಿದ್ದಾರೆ.
ಕಳ್ಳರೆಂದು ಭಾವಿಸಿ ಹಲ್ಲೆ ನಡೆಸಿದವರನ್ನು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ತೀವ್ರ ಹಲ್ಲೆಗೊಳಗಾದ ಇಬ್ಬರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಅಪರಿಚಿತರ ಮೇಲೆ ಏಕಾಏಕಿ ಹಲ್ಲೆ ಮಾಡಬಾರದು ಎಂದು ಹೊಸಮನಿ ಹಟ್ಟಿ ನಿವಾಸಿಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇಂಡಿ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ವಿಜಯಪುರ ಮರ್ಯಾದೆ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಲವರ್ ಹೆಣ ನದಿಗೆಸೆಯುವ ಮುನ್ನವೇ ಪ್ರೇಯಸಿ ಆತ್ಮಹತ್ಯೆ