ವಿಜಯಪುರ: ಕೊರೊನಾ ಭೀತಿ ನಡುವೆಯೇ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿತ್ತು. ಅದರಲ್ಲಿ ವಿಜಯಪುರದ ಸಿಕ್ಯಾಬ್ ಆಂಗ್ಲ ಮಾಧ್ಯಮ ಶಾಲೆಯ ಅವಳಿ ಸಹೋದರಿಯರು ತೆಗೆದುಕೊಂಡ ಅಂಕಗಳು ಎಲ್ಲರಿಗೂ ಅಚ್ಚರಿ ಮೂಡಿಸುವಂತಿದೆ.
ನಗರದ ನವರಸಪುರ ಕಾಲೋನಿಯ ಸಿಕ್ಯಾಬ್ ಶಾಲೆಯ ಸಬಾ ಮತ್ತು ಜೇಬಾ ಮುಲ್ಲಾ ಅವರ ತಂದೆ ಲಿಯಾಕತ್ ಅಲಿ ಹಾಗೂ ತಾಯಿ ಜಾಹೀದಾ ಪರ್ವಿನ್ ಇಬ್ಬರೂ ಶಿಕ್ಷಕರು. ಈ ವರ್ಷ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಬಾ ಮತ್ತು ಜೇಬಾ 625 ಕ್ಕೆ 620 ಅಂಕಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವಿಶೇಷ ಅಂದ್ರೆ ಪ್ರತಿ ವಿಷಯದಲ್ಲಿಯೂ ಇಬ್ಬರು ಒಂದೇ ರೀತಿಯ ಅಂಕ ಗಳಿಸಿದ್ದಾರೆ. ಇದು ಕಾಕತಾಳೀಯವೋ ಅಥವಾ ಇಬ್ಬರ ಬುದ್ದಿಮಟ್ಟ ಒಂದೇ ರೀತಿ ಇದೆಯೋ ಎಂದು ಅನೇಕರು ಅಚ್ಚರಿ ಮೂಡಿಸಿದ್ದಾರೆ.
ಇಂಗ್ಲಿಷ್ ವಿಷಯದಲ್ಲಿ 125 ಕ್ಕೆ 125, ಕನ್ನಡ ಮತ್ತು ಹಿಂದಿ ವಿಷಯದಲ್ಲಿ 100 ಕ್ಕೆ 100 ಅಂಕ, ಗಣಿತ ಮತ್ತು ಸಮಾಜ ವಿಜ್ಞಾನ ದಲ್ಲಿ 100 ಕ್ಕೆ 98 ಹಾಗೂ ವಿಜ್ಞಾನ ದಲ್ಲಿ 99 ಅಂಕ ಗಳಿಸಿದ್ದಾರೆ.
ಒಟ್ಟಿನಲ್ಲಿ ಈ ಅವಳಿ ವಿದ್ಯಾರ್ಥಿಗಳ ಉತ್ತಮ ಹವ್ಯಾಸ, ಓದಿನಲ್ಲಿ ತೋರುತ್ತಿದ್ದ ಸಮಾನ ಆಸಕ್ತಿ ಒಂದೇ ರೀತಿಯ ಫಲಿತಾಂಶ ಬರುವಂತೆ ಮಾಡಿದೆ.