ವಿಜಯಪುರ : ಶಾಲೆ ಕೊಠಡಿಯ ಮೇಲ್ಛಾವಣಿ ಕುಸಿದು ಬಿದ್ದು ಮೂವರು ವಿದ್ಯಾರ್ಥಿನಿಯರಿಗೆ ಗಾಯವಾದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನಂದಿಹಾಳ ಪಿಯು ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಓರ್ವ ವಿದ್ಯಾರ್ಥಿನಿಗೆ ಗಂಭೀರವಾಗಿ ಗಾಯವಾಗಿದೆ. ಇಬ್ಬರು ವಿದ್ಯಾರ್ಥಿನಿಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಿಂದಾಗಿ ಶಾಲೆಯ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಮೇಲ್ಛಾವಣೆ ಕುಸಿಯುತ್ತಿದ್ದಂತೆ ಹೆದರಿದ ವಿದ್ಯಾರ್ಥಿನಿಯರು ಕೊಠಡಿಗಳಿಂದ ಹೊರ ಬಂದು, ಶಾಲೆಯ ಆವರಣದಲ್ಲಿ ಕುಳಿತುಕೊಳ್ಳಬೇಕಾಯಿತು.
ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯಿಂದ ಗಾಬರಿಗೊಂಡ ವಿದ್ಯಾರ್ಥಿಗಳ ಪೋಷಕರು, ಗ್ರಾಮಸ್ಥರು ಜಮಾಯಿಸಿ ಶಿಕ್ಷಣ ಇಲಾಖೆಯ ವಿರುದ್ಧ ಪ್ರತಿಭಟಿಸಿದರು.
ಶಾಲೆ ದುರಸ್ಥಿಗೆ ಎರಡು ತಿಂಗಳ ಹಿಂದೆ ಮನವಿ ಮಾಡಿದ್ದರೂ ಶಿಕ್ಷಣ ಇಲಾಖೆ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಈ ಕೂಡಲೇ ಬಿಇಒ ಭೇಟಿ ನೀಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದರು.
ಓದಿ: ಕೋವಿಡ್ ನಿಯಮ ಉಲ್ಲಂಘನೆ ಮಾಡಿರುವ ಎಲ್ಲ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು : ಡಿಕೆಶಿ ಆಗ್ರಹ