ವಿಜಯಪುರ: ಶಾಲೆಯ ಒಂದನೇ ಮಹಡಿಯಿಂದ ಆಯತಪ್ಪಿ ನೀರಿನ ಟ್ಯಾಂಕ್ ಮೇಲೆ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಇಂಡಿ ಪಟ್ಟಣದಲ್ಲಿ ಬುಧವಾರ ನಡೆದಿದೆ. ಪಟ್ಟಣದಲ್ಲಿರುವ ಖಾಸಗಿ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದ ಶಿವಾರಾಜ್ ರೋಡಗಿ ಮೃತಪಟ್ಟ ಬಾಲಕ.
ಮೆಟ್ಟಿಲಿನ ಮೇಲಿಂದ ಬಿದ್ದ ತಕ್ಷಣ ಬಾಲಕ ಶಿವಾರಾಜ್ನನ್ನು ಇಂಡಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ತರಲಾಗಿತ್ತು. ಆದರೆ, ದಾರಿ ಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ. ಬಾಲಕನನ್ನು ಆಸ್ಪತ್ರೆಗೆ ತಂದ ವಿಷಯ ತಿಳಿದ ಸಂಬಂಧಿಕರು, ಬಂದು ನೋಡಿದಾಗ ಬಾಲಕ ಮೃತಪಟ್ಟಿದ್ದ. ಈ ಬಗ್ಗೆ ವೈದ್ಯರನ್ನು ಕೇಳಿದಾಗ, ಶಾಲಾ ಆಡಳಿತ ಮಂಡಳಿಯವರು ಕರೆದುಕೊಂಡ ಬರುವ ಮೊದಲೇ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ಪೋಷಕರ ಆಕ್ರೋಶ: ಆದರೆ, ಬಾಲಕ ಮೃತಪಟ್ಟರೂ ತಮಗೆ ಸರಿಯಾದ ಮಾಹಿತಿ ನೀಡಿಲ್ಲ, ನಿಮ್ಮ ಹುಡುಗ ಶಾಲೆಯಲ್ಲಿ ಬಿದ್ದಿದ್ದಾನೆ, ಆಸ್ಪತ್ರೆಗೆ ಬನ್ನಿ ಎಂದಷ್ಟೇ ಮಾಹಿತಿ ನೀಡಿದ್ದಾರೆ ಎಂದು ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದ ಇಂಡಿ ಪೊಲೀಸರು, ವಿಜಯಪುರಕ್ಕೆ ಆಗಮಿಸಿ ಮೃತ ಬಾಲಕನ ಪೋಷಕರ ಜೊತೆ ಮಾತುಕತೆ ನಡೆಸಿ ಮಾಹಿತಿ ಕಲೆ ಹಾಕಿದರು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೆಲ ಸಂಘಟನೆಗಳ ಮುಖಂಡರು ಇದೇ ವೇಳೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಶಾಲೆಯಲ್ಲಿ ಬಸ್ಕಿ ಹೊಡೆಯುವಾಗ ಪ್ರಜ್ಞೆ ತಪ್ಪಿ 4ನೇ ತರಗತಿ ವಿದ್ಯಾರ್ಥಿ ಸಾವು
ಈ ಸಂಬಂಧ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದೆ. ಬಾಲಕ ಶಾಲೆಯಲ್ಲಿ ನೀರು ಕುಡಿಯಲು ಹೋದಾಗ ಆಯತಪ್ಪಿ ಬಿದ್ದಿದ್ದರಿಂದ ತಲೆಗೆ ಬಲವಾಗಿ ಪೆಟ್ಟು ಬಿದ್ದಿತ್ತು. ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ತನಿಖೆ ಮುಂದುವರೆದಿದೆ ಎಂದು ಈಟಿವಿ ಭಾರತ್ಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇಂಡಿ ಠಾಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.