ವಿಜಯಪುರ: ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಲಾಕ್ಡೌನ್ ಮತ್ತಷ್ಟು ಬಿಗಿಗೊಳಿಸಲಾಗಿದೆ. ಸಾರ್ವಜನಿಕರು ಅನವಶ್ಯಕವಾಗಿ ಹೊರಗೆ ಓಡಾಡುವದನ್ನು ನಿಲ್ಲಿಸಬೇಕು. ಪೊಲೀಸರು ಸಹ ಅನವಶ್ಯಕವಾಗಿ ಜನರ ಮೇಲೆ ಲಾಠಿಚಾರ್ಚ್ ಮಾಡಬಾರದು. ಸಾರ್ವಜನಿಕರು ನಿಯಮ ಮೀರಿದರೆ ಕಾನೂನು ಕ್ರಮ ಕೈಗೊಳ್ಳಿ ಎಂದು ಸಚಿವೆ ಶಶಿಕಲಾ ಜೊಲ್ಲೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ನೂತನ ಪ್ರವಾಸಿ ಮಂದಿರದಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಕೋವಿಡ್ ನಿಯಂತ್ರಣಕ್ಕೆ ಬೀಟ್ ವ್ಯವಸ್ಥೆ ಕುರಿತು ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಈಗಾಗಲೇ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸದಸ್ಯರನ್ನು ಒಳಗೊಂಡ ಕಾರ್ಯಪಡೆಗಳನ್ನು ರಚಿಸಲಾಗಿದೆ. ಅವರಿಗೆ ಸೂಕ್ತ ರೀತಿಯಲ್ಲಿ ನೆರವಾಗುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಇದನ್ನೂ ಓದಿ: ತುಂಬು ಗರ್ಭಿಣಿಯ ಪ್ರಾಣ ತೆಗೆಯಿತು ಕೊರೊನಾ: ಹೊಟ್ಟೆಯಲ್ಲಿದ್ದ ಮಗುವಿನ ಜೀವ ಉಳಿಸಿದ್ರು ವೈದ್ಯರು
ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ದೃಢವಾದರೂ ಕೂಡ ಜನರು ಆಸ್ಪತ್ರೆಗೆ ಬರಲು ನಿರಾಕರಿಸುತ್ತಿದ್ದಾರೆ. ಇಂತಹ ಪ್ರಕರಣಗಳ ಬಗ್ಗೆ ವಿಶೇಷ ಗಮನ ನೀಡಬೇಕು. ಪ್ರತಿ ಗ್ರಾಮದಲ್ಲಿ ಬೀಟ್ ಸಿಬ್ಬಂದಿ ನಿರಂತರವಾಗಿ ಭೇಟಿ ನೀಡಿ ಕಾರ್ಯಪಡೆಗಳೊಂದಿಗೆ ಸಮನ್ವಯತೆ ಸಾಧಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದರು.
ಮಹಾರಾಷ್ಟ್ರ ಗಡಿ ಭಾಗ ಸೇರಿದಂತೆ ಎಲ್ಲ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಬೇಕು. ಅನಧಿಕೃತ ಮರಳು ಸಾಗಾಣಿಕೆ ಮೇಲೆ ನಿಗಾ ವಹಿಸಬೇಕು ಎಂದು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.