ವಿಜಯಪುರ: ಅಪ್ಪಟ ಹಳ್ಳಿ ಪ್ರತಿಭೆಯೊಬ್ಬಳು ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರು ವಿಭಾಗದಲ್ಲಿ ಮೂರು ಚಿನ್ನದ ಪದಕ ಗಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾಳೆ.
ವಿಜಯಪುರ ನಗರದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರಾಜ್ಯಮಟ್ಟದ 15ನೇ ಮೌಂಟನ್ ಬೈಕ್ ಸೈಕ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಮೂರು ವಿಭಾಗದಲ್ಲಿ ಮೂರು ಚಿನ್ನದ ಪದಕ ಗಳಿಸಿ, ಸೌಮ್ಯ ಅಂತಾಪುರ ಅಪರೂಪದ ಸಾಧನೆ ಮಾಡಿದ್ದಾಳೆ.
ಬಾಗಲಕೋಟೆ ಜಿಲ್ಲೆಯ ಛಬ್ಬಿ ಗ್ರಾಮದವರಾದ ಸೌಮ್ಯ, ವಿಜಯಪುರದಲ್ಲಿ ನಡೆದ ಮೌಂಟನ್ ಸೈಕಲ್ ಚಾಂಪಿಯನ್ಷಿಪ್ನಲ್ಲಿ ಲ್ಯಾಪ್ 1ರ ವೈಯಕ್ತಿಕ ಟೈಮ್ ಟ್ರಾಯಲ್ನಲ್ಲಿ ಕೇವಲ 11.14 ಸೆಕೆಂಡ್ಗಳಲ್ಲಿ ಗುರಿ ತಲುಪಿ ಚಿನ್ನ ಬಾಚಿದ್ದಾಳೆ. ಇನ್ನು 18 ವರ್ಷದ ಒಳಗಿನ ಲ್ಯಾಪ್ 1ರ ವೈಯಕ್ತಿಕ ಟೈಮ್ ಟ್ರಯಲ್ ವಿಭಾಗದಲ್ಲಿ 11.09 ಸೆಕೆಂಡ್ನಲ್ಲಿ ಗುರಿ ತಲುಪಿ ಚಿನ್ನಕ್ಕೆ ಮುತ್ತಿಕ್ಕಿದ್ದಅಳೆ. ಇದರ ಜತೆ ಲ್ಯಾಪ್ 2ರ ವೈಯಕ್ತಿಕ ಟೈಮ್ ಟ್ರಯಲ್ನಲ್ಲಿ 24.59 ಸೆಕೆಂಡ್ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನ ಬಾಚಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾಳೆ.
ಸಾಧನೆಯ ಹಿಂದೆ ತಂದೆ...
ಸೌಮ್ಯ ಅಂತಾಪುರ ಸಾಧನೆ ಹಿಂದೆ ಅವರಿಗೆ ಬೆನ್ನೆಲುಬಾಗಿ ತಂದೆ ಚಿದಾನಂದ ಅಂತಾಪುರ ನಿಂತಿದ್ದಾರೆ. ಕೇವಲ 6 ವರ್ಷಗಳ ಹಿಂದೆಯಷ್ಟೆ ಸೈಕ್ಲಿಸ್ಟ್ ಆಗಬೇಕೆಂದು ಹಟ ತೊಟ್ಟು, ಅಭ್ಯಾಸ ಆರಂಭಿಸಿದ ಸೌಮ್ಯಗೆ ಕುಟುಂಬ ವರ್ಗ ಮಾತ್ರವಲ್ಲದೇ ಕೋಚ್ಗಳು ಮಾಡಿದ ಪ್ರೋತ್ಸಾಹವೇ ಇಂದಿನ ಸಾಧನೆಗೆ ಕಾರಣವಂತೆ.
ಕೃಷಿಕನಾಗಿರೋ ತಂದೆ ಚಿದಾನಂದ, ಮಗಳ ಸೈಕಲ್ ಪ್ರೀತಿ ನೋಡಿ ಸಾಲ ಮಾಡಿ ರೋಡ್ ಟ್ರ್ಯಾಕಿಂಗ್ ಸೈಕಲ್ ಕೊಡಿಸಿದ್ದರು. ಅದರ ಮೇಲೆ ಸತತ ಪ್ರಾಕ್ಟೀಸ್ ಮಾಡಿ ಇಂದು ಮೂರು ಚಿನ್ನದ ಪದಕಗಳಿಗೆ ಮುತ್ತಿಕ್ಕಿದ್ದಾಳೆ ಸೌಮ್ಯ. ಆದರೆ ಬಡತನದ ಹಿನ್ನೆಲೆ ಹೊಂದಿರುವ ಸೌಮ್ಯಗೆ ಮೌಂಟನ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಆಧುನಿಕ ಸೈಕಲ್ ಇಲ್ಲದ ಕಾರಣ ಸರಿಯಾಗಿ ಅಭ್ಯಾಸ ಮಾಡಲು ಆಗುತ್ತಿಲ್ಲ. ಮೌಂಟನ್ ಸೈಕ್ಲಿಂಗ್ ಸ್ಪರ್ಧೆ ಇದ್ದಾಗ ಸೈಕ್ಲಿಂಗ್ ಅಸೋಸಿಯೇಷನ್ ಅವರು ಒಂದು ವಾರ ಮುಂಚೆ ನೀಡುವ ಸೈಕಲ್ಅನ್ನೇ ಅವಲಂಬಿಸಬೇಕಾಗಿದೆ.
ಮುಂದಿನ ತಿಂಗಳು ಪುಣೆಯಲ್ಲಿ ನಡೆಯಲಿರುವ ಮೌಂಟನ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಉತ್ಸಾಹದಲ್ಲಿರುವ ಸೌಮ್ಯ, ಸರ್ಕಾರ ಅಥವಾ ಸಂಘ-ಸಂಸ್ಥೆಗಳ ಸಹಾಯದ ನಿರೀಕ್ಷೆಯಲ್ಲಿದ್ದಾಳೆ.