ವಿಜಯಪುರ: ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಶ್ರೀಹರಿ ಗೊಳಸಂಗಿ ಆಯ್ಕೆಯಾಗಿದ್ದಾರೆ. ನಗರದ ವಿಡಿಎ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ, ಮೂರು ವರ್ಷಗಳ ಅವಧಿಗಾಗಿ ಅವರು ನೇಮಕಗೊಂಡರು.
ಕಚೇರಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ದಂಪತಿ ಹಾಗೂ ನೂತನ ಅಧ್ಯಕ್ಷರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಶ್ರೀಹರಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ವೇಳೆ ವಿಡಿಎ ಆಯುಕ್ತ ಔದ್ರಮ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.
ಇದೇ ವೇಳೆ, ನಾಮನಿರ್ದೇಶಿತ ಸದಸ್ಯರಾಗಿ ಸಂಗಣ್ಣ ಕರಡಿ, ರೇವಣ ಸಿದ್ದಪ್ಪ ಜಿರ್ಲಿ, ಲಕ್ಷ್ಮಣ ಜಾಧವ್, ವಿಕ್ರಮ ಗಾಯಕವಾಡ, ಸರೋಜನಿ ಏವೂರ ಅಧಿಕಾರ ಸ್ವೀಕರಿಸಿದರು. ವಿಡಿಎ ನೂತನ ಅಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.