ವಿಜಯಪುರ : ಕೋವಿಡ್ ಹಾಗೂ ಒಮಿಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಉತ್ತರ ಕರ್ನಾಟಕದ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಸತತ 2ನೇ ವರ್ಷವೂ ರದ್ದಾಗಿದೆ.
ಪ್ರತೀ ವರ್ಷ ಸಂಕ್ರಾಂತಿ ಹಬ್ಬದ ದಿನ ವಿಜಯಪುರ ನಗರದಲ್ಲಿಅದ್ದೂರಿಯಾಗಿ ಶ್ರೀ ಸಿದ್ದೇಶ್ವರ ಜಾತ್ರೆ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಅಕ್ಕಪಕ್ಕದ ರಾಜ್ಯಗಳಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಅಲ್ಲಿಂದ ಬರುವ ಭಕ್ತರ ಮೂಲಕ ರಾಜ್ಯದಲ್ಲಿ ಸೋಂಕು ಹರಡುವ ಸಾಧ್ಯತೆಗಳ ಕುರಿತು ತಜ್ಞರು ನೀಡಿದ ಸಲಹೆಯಂತೆ ಜಾತ್ರೆ ರದ್ದುಗೊಳಿಸಲಾಗಿದೆ ಎಂದು ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷ ಬಸಯ್ಯ ಹಿರೇಮಠ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಅಂಗಡಿ, ಮದ್ದು ಸುಡುವುದು, ಜಂಗಿ ನಿಕಾಲಿ ಕುಸ್ತಿ, ಭಾರ ಎತ್ತುವ ಸ್ಪರ್ಧೆ ಹಾಗೂ ಮನರಂಜನೆ ಕಾರ್ಯಕ್ರಮ ಇರುವುದಿಲ್ಲ. ಕೇವಲ ಸಂಪ್ರದಾಯಿಕವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಭಕ್ತರು ಅನವಶ್ಯಕವಾಗಿ ದೇವಸ್ಥಾನಕ್ಕೆ ಬರಬಾರದು. ದೇವರ ದರ್ಶನ ಪಡೆಯಲು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಬಸಯ್ಯ ಹಿರೇಮಠ ತಿಳಿಸಿದ್ದಾರೆ.