ವಿಜಯಪುರ: ಕಂಬಳಿ ಅಸ್ತ್ರವನ್ನು ತಂದವರು ಯಾರು?. ಅದು ಸಿಎಂ ಬಸವರಾಜ್ ಬೊಮ್ಮಾಯಿ. ನಾನು ಅದೇ ಕುರುಬ ಜಾತಿಯಲ್ಲಿ ಹುಟ್ಟಿದ್ದರೂ ಎಂದೂ ಕಂಬಳಿ ವಿಷಯ ಪ್ರಸ್ತಾಪಿಸಿಲ್ಲ. ಅದು ಕುರುಬರ ಸಂಕೇತವಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಸಿಎಂ ಬೊಮ್ಮಾಯಿ ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಇರಬೇಕು ಎಂದು ಕಂಬಳಿಯನ್ನು ರಾಜಕೀಯಕ್ಕೆ ತಂದಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಕಂಬಳಿ ನೇಯ್ದಿದ್ದೇನೆ ಎಂದು ಹೇಳಿಲ್ಲ. ಕುರಿ ಕಾಯ್ದಿದ್ದೇನೆ, ಕುರುಬರ ಜಾತಿಯಲ್ಲಿ ಹುಟ್ಟಿದ್ದೇನೆ ಎಂದಿದ್ದೇನೆ.
ಆದರೆ, ಈ ಬಸವರಾಜ್ ಬೊಮ್ಮಾಯಿ, ಕುಮಾರಸ್ವಾಮಿ ಯಾವಾಗ ಕುರಿ ಕಾಯ್ದಿದ್ದಾರೆ. ಕುಮಾರಸ್ವಾಮಿ ಕುರಿ ಮಂದಿಯಲ್ಲಿ ಮಲಗಿದ್ದೇನೆ ಎಂದು ಹೇಳುತ್ತಾರೆ. ಇವರ ತಂದೆ ದೇವೇಗೌಡರು 1967ರಲ್ಲಿ ಎಂಎಲ್ಎ ಆಗಿದ್ದರು. ಆಗ ಕುಮಾರಸ್ವಾಮಿ ಹುಟ್ಟಿದ್ದಾರೆ. ಅದು ಹೇಗೆ ಕುರಿ ಕಾಯ್ದಿದ್ದಾರೆ. ಕೇವಲ ಸುಳ್ಳು ಹೇಳುತ್ತಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ತಂದೆ ಸಹ ಎಂಎಲ್ಎ, ಎಂಎಲ್ಸಿ ಆಗಿದ್ದರು. ಇವರು ಕುರಿ ಕಾಯಲು ಸಾಧ್ಯವಾ? ಇನ್ನಾದರೂ ಪುರಾವೆ ಇದ್ದರೆ ತೋರಿಸಲಿ. ಕೇವಲ ಪ್ರಚಾರಕ್ಕಾಗಿ ಮಾತನಾಡುತ್ತಿದ್ದಾರೆ. ಕಂಬಳಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದರು.
ಬಿಜೆಪಿ ಶಾಮೀಲು : ರಾಜ್ಯದಲ್ಲಿ ನಡೆಯುತ್ತಿರುವ ಬಿಟ್ ಕಾಯಿನ್ ಹಾಗೂ ಡ್ರಗ್ಸ್ ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಇದರಲ್ಲಿ ಬಿಜೆಪಿ ಶಾಮೀಲು ಆಗಿದೆ. ಹೀಗಾಗಿ, ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿರಬಹುದು. ಆದರೆ, ಇನ್ನೂ ಪ್ರಕರಣ ನಡೆಯುತ್ತಿದೆ. ಅಂಥವರಿಗೆ ರಕ್ಷಣೆ ಕೊಡಬಾರದು ಎಂದರು.
ಓದಿ: 12-18 ವಯಸ್ಸಿನ ಮಕ್ಕಳಿಗೆ ಮೊದಲು ಲಸಿಕೆ ನೀಡಬೇಕು : ಡಾ.ಮಂಜುನಾಥ್