ವಿಜಯಪುರ: ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಆಸ್ತಿ ಅಡವಿಟ್ಟು ಎರಡು ಕೆಜಿ ಹೆಚ್ಚುವರಿ ಅಕ್ಕಿಯನ್ನು ಸಿದ್ದರಾಮಯ್ಯ ಸರ್ಕಾರ ನೀಡಿತ್ತು ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಮುದ್ದೇಬಿಹಾಳ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರದ ಶಿವಾಜಿ ಸರ್ಕಲ್ ಬಳಿ ಗಣೇಶ ಮೂರ್ತಿ ದರ್ಶನ ಪಡೆದ ನಂತರ ಮಾತನಾಡಿದ ಅವರು, ನಿಗಮದ ಆಸ್ತಿ ಅಡವಿಟ್ಟು ಎರಡು ಕೆಜಿ ಹೆಚ್ಚುವರಿ ಅಕ್ಕಿಯನ್ನು ಸಿದ್ದರಾಮಯ್ಯ ನೀಡಿದ್ದರು. ಈಗ ನಾನು ಅಧಿಕಾರ ವಹಿಸಿಕೊಂಡ ಮೇಲೆ ಸಾಲದ ಹಣವನ್ನು ಪಾವತಿಸಿ ನಿಗಮದ ಆಸ್ತಿಯನ್ನು ಮತ್ತೆ ಬಿಡುಗಡೆ ಮಾಡಿಸಿಕೊಂಡಿದ್ದೇನೆ. ಸಿಎಂ ಮೂಲಕ 300 ಕೋಟಿ ರೂ. ಬಿಡುಗಡೆ ಮಾಡಿಸಿದ್ದೇನೆ. ಕಾಂಗ್ರೆಸ್ನಿಂದ ಪಾಠ ಕಲಿಯುವ ಅಗತ್ಯ ಬಿಜೆಪಿಗಿಲ್ಲ ಎಂದರು.
ಪಡಿತರ ಆಹಾರ ಧಾನ್ಯ ಅಕ್ರಮ ಮಾರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಡವರ ಅಕ್ಕಿ ಲೂಟಿಕೋರರ ಕೈಸೇರಬಾರದು. ಅಂತಹವರನ್ನು ಜೈಲಿಗೆ ಹಾಕಿ ಬುದ್ಧಿ ಕಲಿಸುತ್ತೇವೆ. ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಆಗೋದಿಲ್ಲ. ಬರೀ ಡ್ರೈವರ್, ಕ್ಲೀನರ್ಗಳನ್ನು ಹಿಡಿದು ಎಫ್ಐಆರ್ ಮಾಡಿದರೆ ಸಾಲದು. ಇವರ ಹಿಂದಿರುವ ಕಿಂಗ್ ಪಿನ್ಗಳನ್ನು ಹೆಡೆಮುರಿ ಕಟ್ಟಬೇಕು. ಈ ವಿಚಾರವಾಗಿ ಎಂಪಿ ಮತ್ತು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದರು.