ವಿಜಯಪುರ: ಪ್ರಧಾನಿ ಹಾಗೂ ಕೇಂದ್ರ ಹಣಕಾಸು ಸಚಿವರು ಬಿಹಾರಕ್ಕೆ ಉಚಿತ ಕೊರೊನಾ ಲಸಿಕೆ ನೀಡುತ್ತೇವೆ ಎಂದು ಹೇಳಿಕೆ ನೀಡಿರುವುದು ಅವರ ಸಣ್ಣತನ ಪ್ರದರ್ಶಿಸುತ್ತೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಿವಾನಂದ ಪಾಟೀಲ್ ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಇಡೀ ದೇಶಕ್ಕೆ ಹಬ್ಬಿಕೊಂಡಿದೆ. ಆದ್ರೆ, ಬಿಹಾರ ಚುನಾವಣಾ ಪ್ರಚಾರದಲ್ಲಿ ಕೊರೊನಾ ಲಸಿಕೆ ಉಚಿತವಾಗಿ ನೀಡುತ್ತೇವೆ ಎಂದಿರೋದು ಅವ್ರ ಸಣ್ಣತನ ಪ್ರದರ್ಶಿಸುತ್ತೆ. ಮಹಾರಾಷ್ಟ್ರ, ಕರ್ನಾಟಕ ಹಾಗೂ ತಮಿಳನಾಡು ರಾಜ್ಯಗಳಲ್ಲಿ ಹೆಚ್ಚು ಸಕ್ರೀಯ ಪ್ರಕರಣ ಕಾಣುತ್ತಿವೆ. ಆದ್ರೆ, ಬಿಹಾರ ಚುನಾವಣೆಗೆ ಲಸಿಕೆ ಉಚಿತ ಎಂದಿರುವುದು ಸಣ್ಣತನದ ಮಾತು ಎಂದು ಕುಟುಕಿದರು.
ಕೊರೊನಾ ಹಾವಳಿಯಿಂದಾಗಿ ಕೋವಿಡೇತರ ರೋಗಿಗಳು ಚಿಕಿತ್ಸೆಗಾಗಿ ಪರಡಾಟ ನಡೆಸುವಂತಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಓಪಿಡಿ ರೋಗಿಗಳು ಕೂಡ ಕಡಿಮೆಯಾಗಿದ್ದಾರೆ. ಹೀಗಾಗಿ, ಇತರೆ ಕಾಯಿಲೆಗಳಿರುವ ಜನರು ಚಿಕಿತ್ಸೆ ಪಡೆಯಲು ಪರಿತಪಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ, ಕೋವಿಡ್ ಹೊರತುಪಡಿಸಿ ಬೇರೆ ರೋಗಗಳಿಗೆ ತುತ್ತಾಗುವ ಜನರನ್ನು ಕೇಳುವವರೇ ಗತಿಯಿಲ್ಲದಂತಾಗಿದೆ ಎಂದ ಅವರು, ಯಾರೇ ಆಸ್ಪತ್ರೆಗೆ ಹೋದ್ರು ಕೊರೊನಾ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂದು ಹೇಳುತ್ತಿರೋದು ದುರ್ದೈವ ಎಂದರು.
ಸರ್ಕಾರ ಕೊರೊನಾ ವಾರ್ಡ್‌ಗೆ ಎಷ್ಟು ಹಾಸಿಗೆ ಬೇಕು ಅಷ್ಟನ್ನು ಉಳಿಸಿಕೊಂಡು ಉಳಿದ ಬೆಡ್‌ಗಳನ್ನು ಇತರೆ ರೋಗಿಗಳಿಗೆ ನೀಡಬೇಕಿದೆ. ಇಲ್ಲಿಯವರೆಗೆ ಯಾವುದೇ ಸರ್ಕಾರಿ ಹಾಗೂ ಖಾಸಗಿ ವೈದ್ಯರು ನಿರ್ವಹಣೆ ಕುರಿತು ಸರಿಯಾಗಿ ಪ್ರಾಕ್ಟೀಸ್ ಮಾಡ್ತಿಲ್ಲ. ರಾಜ್ಯ ಸರ್ಕಾರ ಕೋವಿಡ್ ಹಾಗೂ ನಾನ್ ಕೋವಿಡ್‌ನ ಸಾವಿನ ಕುರಿತು ಸರ್ವೇ ಮಾಡಬೇಕು. ಆಗ ಮಾತ್ರ ಜನರಿಗೆ ಅನುಕೂಲವಾಗುತ್ತದೆ ಎಂದರು.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಒಂದು ಮಾಡುವಂತೆ ನನ್ನ ಒತ್ತಾಯ: ರಾಜ್ಯದಲ್ಲಿ ಮುಖ್ಯಮಂತ್ರಿಗಳು 5 ವರ್ಷ ಆಡಳಿತ ನಡೆಸಿದರೆ ಸಾಧನೆ ಎನ್ನುವ ಮಟ್ಟಿಗಿದ್ದಾರೆ. ವೈದ್ಯಕೀಯ ಹಾಗೂ ಆರೋಗ್ಯ ಖಾತೆ ಒಂದೇ ಇರಬೇಕು ಎಂದು ನಾನು ಅನೇಕ ಸಿಎಂಗಳಿಗೆ ಮನವಿ ಮಾಡಿದ್ದೆ. ಆದ್ರೆ, ಯಾವುದೇ ಮುಖ್ಯಮಂತ್ರಿಗಳು ಇದರ ಕುರಿತು ಚಿಂತನೆ ಮಾಡಿಲ್ಲ. ಸಚಿವ ಸ್ಥಾನದ ಹಂಚಿಕೆಗಾಗಿ ಎಲ್ಲಾ ಇಲಾಖೆ ಸ್ಥಾನ ಒಡೆದಿದ್ದಾರೆಯೇ ವಿನಾ: ಇದರಿಂದ ಜನ್ರಿಗೆ ಯಾವುದೇ ಉಪಯೋಗವಾಗಿಲ್ಲ ಎಂದು ತಿಳಿಸಿದರು.
ರೈತರ ನೋವಿಗೆ ಸ್ಪಂದಿಸುವ ಕಾರ್ಯ ಮಾಡಲಿ : ಪ್ರವಾಹ ಪರಿಸ್ಥಿತಿಯಿಂದ ಉತ್ತರ ಕರ್ನಾಟಕ ಸಂಪೂರ್ಣವಾಗಿ ನಲುಗಿದೆ. ಹೀಗಾಗಿ ರೈತರು, ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಕಂಗಾಲಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ರೈತರಿಗೆ ಸರಿಯಾಗಿ ಪರಿಹಾರ ಹಾಗೂ ಬೆಂಬಲ ಬೆಲೆ ಸಿಗ್ತಿಲ್ಲ.ಇನ್ನಾದರೂ ಸರ್ಕಾರ ಸರಿಯಾದ ನಿರ್ಣಯ ಮಾಡಿ ರೈತರಿಗೆ ನ್ಯಾಯ ಒದಗಿಸಲಿ ಎಂದು ಒತ್ತಾಯಿಸಿದರು.