ವಿಜಯಪುರ: ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಡಾ. ಬಿ.ಆರ್ ಅಂಬೇಡ್ಕರ್ ಹೆಸರು ಹೇಳದಿದ್ದಕ್ಕೆ ದಲಿತ ಪರ ಸಂಘಟನೆ ಕಾರ್ಯಕರ್ತರು ಸಚಿವೆಯನ್ನು ತರಾಟೆಗೆ ತೆಗೆದುಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ.
ನಗರ ಹೊರವಲಯದ ಅಕ್ಕ ಮಹಾದೇವಿ ಮಹಿಳಾ ವಿವಿಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವೆ, ತಮ್ಮ ಭಾಷಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರು ಉಲ್ಲೇಖ ಮಾಡದಿದ್ದಕ್ಕೆ ಆಕ್ರೋಶಗೊಂಡ ದಲಿತ ಪರ ಸಂಘಟನೆ ಕಾರ್ಯಕರ್ತರು, ನೀವು ಭಾಷಣದಲ್ಲಿ ಸಂವಿಧಾನ ಶಿಲ್ಪಿಯನ್ನ ಮರೆತಿದ್ದೀರಿ ಎಂದು ಜಿಲ್ಲಾ ಉಸ್ತುವಾರಿ ಸಚಿವೆಯನ್ನು ತರಾಟೆಗೆ ತೆಗೆದುಕೊಂಡರು.
ಬಳಿಕ ವೇದಿಕೆಗೆ ಬಂದ ಸಚಿವೆ ಶಶಿಕಲಾ ಜೊಲ್ಲೆ, ಡಾ. ಬಿ.ಆರ್ ಅಂಬೇಡ್ಕರ್ ಬರೆದ ಸಂವಿಧಾನದ ಆಧಾರದ ಮೇಲೆಯೇ ನಾನು ರಾಜಕೀಯ ಪ್ರವೇಶ ಮಾಡಲು ಸಾಧ್ಯವಾಗಿದೆ. ಅಂಬೇಡ್ಕರ್ ಅವರ ಕೊಡುಗೆ ದೇಶಕ್ಕೆ ಅಪಾರವಾಗಿದೆ. ವೇದಿಕೆ ಮೇಲೆ ಅಂಬೇಡ್ಕರ್ ಹೆಸರು ಪ್ರಸ್ತಾಪ ಮಾಡದಿರೋದಕ್ಕೆ ನಾನು ಕ್ಷಮೆಯಾಚಿಸುವೆ ಎಂದರು.
ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಎಸ್ಪಿ ಅನುಪಮ್ ಅಗರವಾಲ್ ಪರಿಸ್ಥಿತಿ ತಿಳಿಗೊಳಿಸಿ ದಲಿತ ಪರ ಸಂಘಟನೆ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.